ತರುಣ್ ಸುಧೀರ್ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಾಗೂ ನಟ. ಖ್ಯಾತ ಖಳನಾಯಕ ದಿವಂಗತ ಸುಧೀರ್ ಅವರ ಕಿರಿಯ ಪುತ್ರನಾದ ಇವರು 1985ರ ಅಕ್ಟೋಬರ್ 9ರಂದು ಹೊಸಪೇಟೆಯಲ್ಲಿ ಜನಿಸಿದರು. ಕೆಎಲ್ಇ ಕಾಲೇಜಿನಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿರುವ ಇವರು, ಒಂದು ವರ್ಷ ಅಶೋಕ ಹೊಟೇಲ್‌ನಲ್ಲಿ ಕೆಲಸ ಮಾಡಿದ್ದರು.
ಸಿನಿಮಾರಂಗ
ತರುಣ್ ಸುಧೀರ್ 1990ರಲ್ಲಿ ತೆರೆಗೆ ಬಂದ ‘ಗಣೇಶನ ಮದುವೆ’ ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಎಕ್ಸ್‌ಕ್ಯೂಸ್ ಮಿ, ಚಪ್ಪಾಳೆ, ವಿಷ್ಣುಸೇನಾ, ಜೊತೆ ಜೊತೆಯಲಿ, ವಿದ್ಯಾರ್ಥಿ, ನವಗ್ರಹ, ಗಜಕೇಸರಿ, ಚೌಕ ಸಿನಿಮಾಗಳಲ್ಲಿಯೂ ಅಭಿನಯಿಸಿದರು.
ನಿರ್ದೇಶನ
ರಾಂಬೋ, ವಿಕ್ಟರಿ, ಅಧ್ಯಕ್ಷ, ಗಜಕೇಸರಿ, ರನ್ನ, ಟೈಗರ್, ರಾಂಬೋ 2, ವಿಕ್ಟರಿ 2 ಸಿನಿಮಾಗಳಲ್ಲಿ ರೈಟರ್ ಆಗಿ ಕೆಲಸ ಮಾಡಿದ್ದ ತರುಣ್, ಚೌಕ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದರು. ಆನಂತರ ರಾಬರ್ಟ್, ಕಾಟೇರದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಮದುವೆ: ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ ಕನ್ನಡಿಗರ ಮನಗೆದ್ದಿರುವ ತರುಣ್ ಸುಧೀರ್, 2024ರ ಆಗಸ್ಟ್ 11ರಂದು ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.