ದಿ ಡಾರ್ಕ್ ನೈಟ್ ಮತ್ತು ಸೂಟ್ಸ್ ಖ್ಯಾತಿಯ ಹಾಲಿವುಡ್ ನಟ ಎರಿಕ್ ರಾಬರ್ಟ್ಸ್ ಅಭಿನಯಿಸಿರುವ, ಅವಿನಾಶ್ ವಿಜಯ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ ‘ಮೈ ಹೀರೋ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ.
‘ಮೈ ಹೀರೋ’ ಇದೇ ಆಗಸ್ಟ್ 23 ರಂದು ತೆರೆ ಕಾಣಲಿದೆ. PVR/Inox ಸ್ಟುಡಿಯೋಸ್ ಕರ್ನಾಟಕದಲ್ಲಿ ಚಿತ್ರವನ್ನು ವಿತರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿತ್ರವು ಜಾಗತಿಕ ಸಾಮಾಜಿಕ ಸಮಸ್ಯೆಯನ್ನು ಒಳಗೊಂಡಿದ್ದು, ಕರ್ನಾಟಕ, ಮಧ್ಯಪ್ರದೇಶ ಮತ್ತು ಅಮೆರಿಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಎರಿಕ್ ರಾಬರ್ಟ್ಸ್ ಅವರಲ್ಲದೆ, ಮೈ ಹೀರೋ ಚಿತ್ರದಲ್ಲಿ ಜಿಲಾಲಿ ರೆಜ್-ಕಲ್ಲಾಹ್ ಮತ್ತು ಡ್ರಾಮಾ ಜೂನಿಯರ್ ಖ್ಯಾತಿಯ ವೇದಿಕ್ ಕೌಶಲ್, ಜೊತೆಗೆ ಕನ್ನಡದ ಪ್ರಮುಖ ನಟರಾದ ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ, ಅಂಕಿತಾ ಅಮರ್ ಮತ್ತು ತನುಜಾ ಕೃಷ್ಣಪ್ಪ ನಟಿಸಿದ್ದಾರೆ.ಚಿತ್ರಕ್ಕೆ ಅವಿನಾಶ್ ವಿಜಯ್ ಕುಮಾರ್ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಮುತ್ತು ರಾಜ್ ಟಿ ಸಂಕಲನ, ಗಗನ್ ಬಡೇರಿಯಾ ಸಂಗೀತ ಸಂಯೋಜಕ, ವೀಣಾ ಎಸ್ ನಾಗರಾಜ್ ಅವರ ಛಾಯಾಗ್ರಹಣ ಇದೆ.