ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗ ಏಳಿಗೆಯನ್ನೇ ಕಂಡಿಲ್ಲ. ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುತ್ತಿವೆ. ನಿರ್ಮಾಪಕರು ನಷ್ಟ ಹಾದಿಯನ್ನು ಹಿಡಿಯುತ್ತಿದ್ದಾರೆ. ಸೋಲಿನ ಸುಳಿಗೆ ಸಿಲುಕಿ ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ಥಿಯೇಟರ್‌ಗೆ ಜನರೇ ಬರುತ್ತಿಲ್ಲ ಅಂತ ಸಿಂಗಲ್ ಸ್ಕ್ರೀನ್‌ಗಳು ಒಂದೊಂದಾಗೇ ಮುಚ್ಚುತ್ತಿವೆ. ಸೂಪರ್‌ಸ್ಟಾರ್‌ಗಳು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಕನ್ನಡ ಚಿತ್ರರಂಗ ಈ ಎಲ್ಲಾ ಸಂಕಷ್ಟಗಳನ್ನು ಎದುರಿಸುತ್ತಿರುವ ಬೆನ್ನಲ್ಲೇ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದೆ. ಇಂದು (ಆಗಸ್ಟ್ 14) ಬೆಳಗ್ಗೆಯಿಂದಲೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ನೇತೃತ್ವದಲ್ಲಿ ಈ ಹೋಮ ಹವನಗಳು ನಡೆಯುತ್ತಿವೆ.
ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ನಡೆಯುತ್ತಿರುವ ವಿಶೇಷ ಪೂಜೆಯಲ್ಲಿ ಇಡೀ ಕನ್ನಡ ಚಿತ್ರೋದ್ಯಮ ಭಾಗಿಯಾಗುತ್ತಿದೆ. ಸುಮಾರು 8 ಮಂದಿ ವಿಶೇಷ ಪುರೋಹಿತರ ತಂಡ ಈ ವಿಶೇಷ ಪೂಜೆಯನ್ನು ನಡೆಸಿಕೊಡುವುದಕ್ಕೆ ಭಾಗಿಯಾಗಿದ್ದಾರೆ. ದೊಡ್ಡಣ್ಣ ಹಾಗೂ ಅವರ ಪತ್ನಿ ಈ ವಿಶೇಷ ಪೂಜೆಯನ್ನು ನಡೆಸಿಕೊಡುತ್ತಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಈ ಪೂಜೆ, ಹೋಮ ಹವನಗಳು ಆರಂಭ ಆಗಿವೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಣ್ಣಮ್ಮಯ್ಯ ಅವರು ಚಿತ್ರರಂಗದ ಸಂಕಷ್ಟವನ್ನು ಎದುರಿಸಲಿದೆ ಅಂತ ಭವಿಷ್ಯ ನುಡಿದಿದ್ದರಂತೆ. ಚಿತ್ರರಂಗ ಮುಂದಿನ ದಿನಗಳಲ್ಲಿ ಸಂಕಷ್ಟಗಳನ್ನು ಎದುರಿಸಲಿದೆ. ಚಿತ್ರರಂಗದಲ್ಲಿ ಸಾವು ನೋವುಗಳು ಆಗಬಹುದು ಎಂದಿದ್ದರಂತೆ. ಆ ಮಾತನ್ನು ದೊಡ್ಡಣ್ಣ ನೆನಪಿಸಿಕೊಂಡು ಚಿತ್ರರಂಗದ ಏಳಿಗೆಗಾಗಿ ವಿಶೇಷ ಪೂಜೆಗಳನ್ನು ಮಾಡಿಸುವುದಕ್ಕೆ ಮುಂದಾಗಿದ್ದಾರೆ.
ಎಲ್ಲಾ ಸಂಕಷ್ಟಗಳಿಂದ ಪಾರಾಗಿ, ಚಿತ್ರರಂಗದಲ್ಲಿ ಮತ್ತೆ ಏಳಿಗೆ ನೆಲೆಸುವಂತೆ ಸುಬ್ರಹ್ಮಣ್ಯ ಸರ್ಪ ಶಾಂತಿ ಹೋಮವನ್ನು ನಡೆಸಲಾಗುತ್ತದೆ. ಅದಕ್ಕೆ ಬೇಕಿರುವ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡು ಪೂಜೆಯನ್ನು ನೆರವೇರಿಸಲಾಗುತ್ತಿದೆ. ದೊಡ್ಡಣ್ಣ ಹಾಗೂ ರಾಕ್‌ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಉಡುಪಿಯ ಪ್ರಕಾಶ್ ಅಣ್ಣಮ್ಮಯ್ಯ ಹಾಗೂ ಅವರ ತಂಡ ಈ ಪೂಜಾ ಕಾರ್ಯವನ್ನು ನಡೆಸಿಕೊಡುತ್ತಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಕರ್ನಾಟಕ ಕಲಾವಿದರ ಸಂಘದಲ್ಲಿ ‘ಗಣಯಾಗ’, ‘ಅಶ್ಲೇಷ ಬಲಿ’, ‘ಸರ್ಪ ಶಾಂತಿ’ ಹಾಗೂ ಮೃತ್ಯುಂಜಯ ಹೋಮ ನಡೆಯುತ್ತಿದೆ. ಈ ಪೂಜೆಯಲ್ಲಿ ಚಿತ್ರರಂಗದ ಎಲ್ಲಾ ವಿಭಾಗದ ಮುಖ್ಯಸ್ಥರಿಗೂ ಆಹ್ವಾನವನ್ನು ನೀಡಲಾಗಿದೆ. ಸುಮಾರು 600ಕ್ಕೂ ಅಧಿಕ ಮಂದಿ ಈ ವಿಶೇಷ ಪೂಜೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ಎಂದ ಕೂಡಲೇ ಅಪಸ್ವರ ಎದ್ದಿತ್ತು. ಇದು ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಅಂತ ಕಲಾವಿದರ ಸಂಘದಲ್ಲಿ ಹಮ್ಮಿಕೊಂಡಿರುವ ಪೂಜೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬೆನ್ನಲ್ಲೇ ರಾಕ್‌ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಜಂಟಿಯಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿ, ಈ ವಿಶೇಷ ಪೂಜೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.