ಕೆಲಸ ಮಾಡುವ ಸ್ಥಳದಲ್ಲಿಯೂ ಹೆಣ್ಣು ಸುರಕ್ಷಿತವಾಗಿಲ್ಲ ಅಂದರೆ ಇನ್ನೆಲ್ಲಿ ? ಆಶಿಕಾ ರಂಗನಾಥ್..!

Spread the love

ನೆಲದ ಮೇಲೆ ಹುಟ್ಟಿ, ಉಸಿರಾಡಲೂ ಯೋಗ್ಯತೆಯಿಲ್ಲದ ಕ್ರಿಮಿಗಳು ಹೆಣ್ಣೊಬ್ಬಳ ಮೇಲೆ ಎರಗಿ ಆಕೆಯ ದೇಹ, ಮನಸ್ಸನ್ನು ಗಾಯಗೊಳಿಸುತ್ತವೆ. ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತಾದ ಸುದ್ದಿಗಳನ್ನು ನೋಡುತ್ತಲೇ ಕೇಳುತ್ತಲೇ ಇದ್ದೇವೆ.ಸ್ತ್ರೀಯನ್ನು ದೈವೀ ಸ್ವರೂಪದಲ್ಲಿ ಸ್ವೀಕರಿಸಿರುವ ಭಾರತದಂತಹ ರಾಷ್ಟ್ರದಲ್ಲೂ ಸ್ತ್ರೀಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಕುರಿತಾಗಿ ಬೆಂಕಿ ಹತ್ತಿ ಕೆಂಡ ಆರುವವರೆಗೂ ವಿರೋಧಿ ಘೋಷಣೆಗಳು, ಧರಣಿಗಳು, ಮೆರವಣಿಗೆಗಳನ್ನು ಮಾಡುತ್ತಲೇ ಇದ್ದೇವೆ. ಆದರೂ ಮಹಿಳೆ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಕೋಲ್ಕತ್ತಾದಲ್ಲಿ ಅಶ್ಲೀಲ ಚಿತ್ರ ವ್ಯಸನಿ, ಹೆಣ್ಣುಬಾಕನೊಬ್ಬ ಕೋಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ.ಈ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟ ಪ್ರತಿಭಟನೆ ಮಾಡುತ್ತಿದೆ. ಇನ್ನೂ ದೇಶದ ನಾನಾ ಭಾಗಗಳಲ್ಲಿನ ಸಂಘ-ಸಂಸ್ಥೆಗಳು ಈ ಕೌರ್ಯಕ್ಕೆ ತಕ್ಕ ಶಿಕ್ಷಿಯಾಗಬೇಕು ಎಂದು ಆಗ್ರಹಿಸುತ್ತಿವೆ. ಧರಣಿಯನ್ನೂ ನಡೆಸುತ್ತಿವೆ. ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆಯೂ ಆಗಿರುವ ಕಂಗನಾ ರಣಾವತ್ ಕೂಡ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಯ ಜವಾಬ್ಧಾರಿಯನ್ನು ಸಿಬಿಐಗೆ ವಹಿಸಬೇಕೆಂದು ಹೇಳಿದ್ದಾರೆ. ಆಕ್ರೋಶವನ್ನು ವ್ಯಕ್ತಪಡಿಸಿ ತಮ್ಮ ಮನದ ಸಂಕಟವನ್ನೂ ಹೊರ ಹಾಕಿದ್ದಾರೆ. ಇದೀಗ ಕನ್ನಡದ ನಟಿ ಆಶಿಕಾ ರಂಗನಾಥ್ ಕೂಡ ಈ ಆಘಾತಕಾರಿ ಘಟನೆ ಖಂಡಿಸಿ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಕೊಲ್ಕತ್ತಾದ ಬರ್ಬರತೆಯ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಆಶಿಕಾ ರಂಗನಾಥ್, ಅರ್​ಜಿ ಕರ್ ಮೆಡಿಕಲ್ ಕಾಲೇಜ್​ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ ಎಂದಿದ್ದಾರೆ.
ಕೆಲವು ನಾಯಕರು ಹೇಳುವ ಪ್ರಕಾರ ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್​ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ ತರಹದ್ದು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಕೂಡ ಆಗಬಹುದು. ಇದನ್ನೂ ಆದಷ್ಟು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಆ ಶಿಕ್ಷೆ ಇಂತಹ ಸೈಕೋಪಾತ್‌ಗಳಿಗೆ ಎಚ್ಚರಿಕೆಯ ಘಂಟೆಯಾಗಬೇಕು ಎಂದು ಆಶಿಕಾ ರಂಗನಾಥ್ ಆಗ್ರಹಿಸಿದ್ದಾರೆ. ಇನ್ನು, ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜಯ್‌ ರಾಯ್ ಹಿಂಸಾತ್ಮಕ ಅಶ್ಲೀಲ ಚಿತ್ರ ವ್ಯಸನಿ ಎಂಬುದು ಆತನ ಮೊಬೈಲ್ ಪರಿಶೀಲಿಸಿದಾಗ ಕಂಡು ಬಂದಿದೆ. ಆತನ ಮೊಬೈಲ್ ನಲ್ಲಿ ಅತೀ ಹೆಚ್ಚು ಪೋರ್ನ್ ವಿಡಿಯೋಗಳಿವೆ. ಅಂತಹ ವಿಷಯಗಳನ್ನು ನೋಡುವುದು ಅಸಹಜವಾಗಿದ್ದು ಆರೋಪಿಯ ಮನಸ್ಥಿತಿಯ ಬಗ್ಗೆ ಅಚ್ಚರಿಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *