ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ “ಎಲ್ಲಾ ಓಕೆ.. ಕೂಲ್ ಡ್ರಿಂಕ್ ಯಾಕೆ?” ಎಂಬ ಜಾಹೀರಾತನ್ನು ನಿರ್ದೇಶಿಸಿದ್ದ ರಾಜೇಶ್ ರಾಮಸ್ವಾಮಿಯ ಕಿರುಚಿತ್ರ ‘ಇರುವೆ’ ಈಗ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.
17 ನಿಮಿಷಗಳ ಕನ್ನಡ ಕಿರುಚಿತ್ರ ‘ಇರುವೆ’ಗೆ ರಾಜೇಶ್ ರಾಮಸ್ವಾಮಿ ಅವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಜಾಹೀರಾತಿನ ನಿರ್ಮಾಪಕ ಮತ್ತು ಬೆಂಗಳೂರಿನ ದಿ ಸ್ಕ್ರಿಪ್ಟ್ ರೂಮ್ ಸಂಸ್ಥಾಪಕರಾಗಿರುವ ರಾಮಸ್ವಾಮಿ ಅವರು ಎರಡು ದಶಕಗಳ ಹಿಂದೆ ಉಪೇಂದ್ರ ಅಭಿನಯದ “ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ” ಎಂಬ ಅಪ್ರತಿಮ ಅಡಿಬರಹದಿಂದ ಖ್ಯಾತಿ ಗಳಿಸಿದ್ದರು .
ಇರುವೆ ಕುರಿತು ಮಾತನಾಡಿದ ರಾಮಸ್ವಾಮಿ ಅವರು, “ನಾನು ಯಾವಾಗಲೂ ಆರ್‌ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಮತ್ತು ಶಂಕರ್ ನಾಗ್ ಅವರ ರೂಪಾಂತರಗಳಿಂದ ಪ್ರಭಾವಿತನಾಗಿದ್ದೇನೆ. ಈ ಕಥೆಗಳನ್ನು ಶಂಕರ್‌ನಾಗ್ ಅವರು ಕಿರುತೆರೆಗೆ ಅಳವಡಿಸಿದ ರೀತಿನೂ ಇಷ್ಟ. ಈ ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮವಾದ ಅವಲೋಕನಗಳನ್ನು ನಾನೊಬ್ಬ ವೀಕ್ಷಕನಾಗಿ, ಓದುಗನಾಗಿ ಆನಂದಿಸುವ ಸಂಗತಿ. ಅಂದಿನಿಂದ, ನನಗೆ ಪ್ರತಿದಿನ ಭೇಟಿಯಾಗುವ ಈ ಸಾಮಾನ್ಯ ಜನರ ಬಗ್ಗೆ ಕುತೂಹಲವಿದೆ. ಆ ಕಥೆಗಳನ್ನು ಇಟ್ಟುಕೊಂಡು ಇರುವೆ ಕಿರುಚಿತ್ರ ತಯಾರಿಸಲಾಗಿದೆ” ಎಂದಿದ್ದಾರೆ.
ಇನ್ನು ಇರುವೆ, ಜಯನಗರದಲ್ಲಿ ನಡೆದಿರುವ 70 ವರ್ಷದ ಗೋವಿಂದಯ್ಯನ ಕಥೆಯನ್ನು ಹೇಳುತ್ತದೆ. ಅವರ ಮನೆಯಲ್ಲಿರುವ ಕೆಂಪು ಇರುವೆಗಳ ಸುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಅಂದ್ಹಾಗೆ ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣವಾಗಿದೆ. “ನಾವು ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ, ಅವರು ಸರಿ.. ನನಗೆ ಕಥೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ ‘ಉದ್ದೇಶ’ ಯಾವುದು? ಎಂದು ಕೇಳಿದ್ದರು. ಆ ಪ್ರಶ್ನೆ ನನ್ನನ್ನೂ ಕಾಡಲು ಪ್ರಾರಂಭವಾಯ್ತು. ಪ್ರಾಮಾಣಿಕವಾಗಿ, ಸರ್, ತಮಾಷೆಗಾಗಿ ಎಂದು ಹೇಳಿದೆ. ಈ ಕಾರಣಕ್ಕೆ ಇರುವೆ ಕಿರುಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಯೂಟ್ಯೂಬ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ” ಎಂದು ರಾಜೇಶ್ ರಾಮಸ್ವಾಮಿ ಹೇಳಿದ್ದಾರೆ.
‘ಇರುವೆ’ ಕಿರುಚಿತ್ರದಲ್ಲಿ ಹಿರಿಯ ನಟ ದತ್ತಣ್ಣ, ಮಹಾಂತೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಈ ಕಿರುಚಿತ್ರದ ಪ್ರಮುಖ ಕಲಾವಿದರು. ಸದ್ಯ ಈ ಕಿರುಚಿತ್ರ ದಿ ಸ್ಕ್ರಿಪ್ಟ್ ರೂಮ್ ಅನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ