ಬೆಂಗಳೂರು: ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರನ್ನು ಇನ್ನಿಲ್ಲದಂತೆ ಕಾಡಿದ್ದ Deepfake ಭೂತ ಇದೀಗ ಕನ್ನಡ ಚಿತ್ರರಂಗದ ದೊಡ್ಮನೆಗೂ ಕಾಡಲಾರಂಭಿಸಿದ್ದು, ಕಿಡಿಗೇಡಿಯೋರ್ವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ವಿಡಿಯೋ ಅಪ್ಲೋಡ್ ಮಾಡಿ ಕುಕೃತ್ಯ ಮೆರೆದಿದ್ದಾನೆ.
ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಡೀಪ್‌ಫೇಕ್ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಪೋಸ್ಟ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಳಮಟ್ಟದ ಭಾಷೆ ಬಳಸಿದ್ದಾನೆ.’ಗಂಡ ಸತ್ತ ಮು** ಅಶ್ವಿನಿ ಪುನೀತ್ ರಾಜ್ ಕುಮಾರ್‌ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ 29 ಅಕ್ಟೋಬರ್ 2024 ರಂದು ನಾನು ವಿವಾಹವಾಗಲಿದ್ದೇನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ ` ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
ಅಲ್ಲದೇ ನೇರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೇ ಟ್ಯಾಗ್ ಮಾಡಿದ್ದಾನೆ.
ವ್ಯಾಪಕ ಆಕ್ರೋಶ, ಕಿಡಿಗೇಡಿ ಬಂಧನಕ್ಕೆ ಆಗ್ರಹ
ಇನ್ನು ಕಿಡಿಗೇಡಿಯ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಡೀಪ್‌ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಕೂಡಲೇ ಈ ದುರುಳನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಯಾರು ಈ ಯೋಗೇಂದ್ರ ಪ್ರಸಾದ್?
ಟ್ವಿಟರ್‌ನಲ್ಲಿ ಕೇವಲ 100 ಫಾಲೋವರ್ಸ್ ಹೊಂದಿರುವ ಯೋಗೇಂದ್ರ ಪ್ರಸಾದ್ ಎಂಬ ಹೆಸರಿನ ಈ ವ್ಯಕ್ತಿ ತಾನು ರಾಜವಂಶದ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳ, ಬಿನ್ನಿ ಪೇಟೆ ಘಟಕದ ಅಧ್ಯಕ್ಷ ಎಂದು ತನ್ನ ಬಯೋನಲ್ಲಿ ಹಾಕಿಕೊಂಡಿದ್ದು, ತನ್ನ ಟ್ವಿಟರ್ ಪೋಸ್ಟ್ ಗಳಲ್ಲಿ ಟ್ರೋಲ್ ವಿಚಾರಗಳನ್ನು ಹಾಕಿಕೊಂಡಿದ್ದಾನೆ.