ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಧನ್ವೀರ್ ಮತ್ತು ರೀಷ್ಮಾ ನಾಣಯ್ಯ ನಟನೆಯ ವಾಮನ ಚಿತ್ರ ಒಂದು ವರ್ಷದ ಹಿಂದೆಯೇ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಅನಿರೀಕ್ಷಿತ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿದ್ದು, ಕೊನೆಗೂ ಬಹುನಿರೀಕ್ಷಿತ ಚಿತ್ರ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಚಿತ್ರದ ‘ಮುದ್ದು ರಾಕ್ಷಸಿ’ ಮತ್ತು ‘ವಾ ವಾ ವಾಮನ’ ಎಂಬ ಹಾಡುಗಳನ್ನು ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿವೆ. ಚಿತ್ರದ ಟೀಸರ್ ಕೂಡ ಎಲ್ಲರ ಗಮನ ಸೆಳೆದಿದೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಶಂಕರ್ ರಾಮನ್ ವಾಮನ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಏಕ್ ಲವ್ ಯಾ, ಯುಐ ಮತ್ತು ಬಾನದಾರಿಯಲ್ಲಿ ಚಿತ್ರಗಳ ಪಾತ್ರಗಳಿಗೆ ಹೆಸರುವಾಸಿಯಾದ ರೀಷ್ಮಾ ನಾಣಯ್ಯ ಧನ್ವೀರ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಭೂಷಣ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಮಹೇಂದ್ರ ಸಿಂಗ್ ಅವರ ಛಾಯಾಗ್ರಹಣವಿದೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.2019ರಲ್ಲಿ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಧನ್ವೀರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು. ನಂತರ ಹರಿ ಸಂತೋಷ್ ನಿರ್ದೇಶನದ ‘ಬೈ ಟು ಲವ್’ ಮತ್ತು ಜಯತೀರ್ಥ ನಿರ್ದೇಶನದ ‘ಕೈವ’ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇದೀಗ ತಮ್ಮ ನಾಲ್ಕನೇ ಚಿತ್ರ ವಾಮನದಲ್ಲಿ ಮಾಸ್-ಆ್ಯಕ್ಷನ್ ಹೀರೋ ಆಗಿ ಧನ್ವೀರ್ ಪ್ರೇಕ್ಷಕರ ಎದುರಿಗೆ ಬರಲು ಸಜ್ಜಾಗಿದ್ದಾರೆ.