ಟಾಲಿವುಡ್ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ವಿರುದ್ಧ ಆಪ್ತ ಸ್ನೇಹಿತನೊಬ್ಬ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಆತ್ಮಹತ್ಯೆಗೆ ರಾಜಮೌಳಿ ಕಾರಣ ಎಂದು ಡೆತ್‌ನೋಟ್ ಬರೆದಿರುವ ರಾಜಮೌಳಿ ಸ್ನೇಹಿತ ಶ್ರೀನಿವಾಸ್ ರಾವ್ ತೆಲುಗು ಚಿತ್ರರಂಗದಲ್ಲೇ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ.
ಯಮದೊಂಗ ನಿರ್ಮಾಪಕ ಶ್ರೀನಿವಾಸ್ ರಾವ್ ಅವರು ರಾಜಮೌಳಿ ವಿರುದ್ಧ ಡೆತ್‌ನೋಟ್ ಬರೆದಿದ್ದು, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಆತ್ಮಹತ್ಯೆಗೆ ರಾಜಮೌಳಿ ಕಾರಣ ಎಂದಿರುವ ಶ್ರೀನಿವಾಸ್ ರಾವ್ ಅವರು ಸ್ಫೋಟಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಗುರುವಾರ (ಫೆ.27ರಂದು) ಶ್ರೀನಿವಾಸ್ ವಿಡಿಯೋ ಹೇಳಿಕೆ ಮತ್ತು ಮೆಟ್ಟು ಪೊಲೀಸ್ ಠಾಣೆಗೆ ಪತ್ರ ಬರೆದು ರಾಜಮೌಳಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ನಾನು ಮತ್ತು ರಾಜಮೌಳಿ 1990ರಿಂದಲೇ ಸ್ನೇಹಿತರು. ನಮ್ಮ ಗೆಳತನದ ಬಗ್ಗೆ ಖ್ಯಾತ ನಿರ್ಮಾಪಕರೊಬ್ಬರಿಗೆ ಗೊತ್ತಿದೆ. ನಾನು ಸಾಯಲು ಹೊರಟಿದ್ದೇನೆ. ನನ್ನ ಸಾವಿಗೆ ರಾಜಮೌಳಿ ಹಾಗೂ ರಮಾ ರಾಜಮೌಳಿ ಅವರೇ ಕಾರಣ. ಇದನ್ನು ನಾನು ಪಬ್ಲಿಸಿಟಿಗೋಸ್ಕರ ಮಾಡುತ್ತಿಲ್ಲ.
ಒಬ್ಬ ಹೆಣ್ಣಿಗಾಗಿ ರಾಜಮೌಳಿ ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟ. ನಾನು ರಾಜಮೌಳಿ ಒಬ್ಬಳನ್ನು ಪ್ರೀತಿಸಿದ್ದೆವು. ನಮ್ಮದು ʼಆರ್ಯ -2ʼ ತರ ಲವ್ ಸ್ಟೋರಿ ಇತ್ತು. ರಾಜಮೌಳಿಗಾಗಿ ನಾನು ಪ್ರೀತಿಯನ್ನು ತ್ಯಾಗ ಮಾಡಿದೆ. 55 ವರ್ಷದಿಂದ ನಾನು ಒಂಟಿಯಾಗಿರಲು ರಾಜಮೌಳಿಯೇ ಕಾರಣ. ʼಯಮದೊಂಗʼದ ತನಕ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ಒಬ್ಬ ಹೆಣ್ಣಿಗಾಗಿ ನನ್ನ ವೃತ್ತಿಜೀವನವನ್ನು ಹಾಳುಮಾಡಿದರು ಎಂದು ಆರೋಪಿಸಿದ್ದಾರೆ.
ಕೆಲ ಸಮಯದ ಹಿಂದಷ್ಟೇ ನಾನು ರಾಜಮೌಳಿ ಬಳಿ ನಮ್ಮ ಟ್ರಯಾಂಗಲ್ ಲವ್ ಸ್ಟೋರಿಯನ್ನು ಸಿನಿಮಾ ಮಾಡುತ್ತೇನೆ ಎಂದೆ. ಆ ಅದು ರಾಜಮೌಳಿಗೆ ಭೀತಿ ಹುಟ್ಟಿಸಿತು. ಅವನ ಕತೆಯನ್ನು ಎಲ್ಲಾ ಹೇಳಿ ಬಿಡುತ್ತೇನೆ ಎನ್ನುವ ಭಯದಲ್ಲೇ ಅವನು ನನಗೆ ಹಿಂಸೆ ನೀಡಲು ಶುರು ಮಾಡಿದ. ‘ಶಾಂತಿ ನಿವಾಸʼ ಧಾರಾವಾಹಿಯ ದಿನಗಳಲ್ಲಿ ರಾಜಮೌಳಿ ಜತೆ ಕೆಲಸ ಮಾಡಿದ್ದೇನೆ.
ಆ ಸಮಯದಲ್ಲಿ ನಾನು ರಾಜಮೌಳಿಗೆ ಸೀನ್‌ಗಳನ್ನು ವಿವರಿಸಿದ್ದರೂ ಮಹಿಳೆಯ ಪ್ರಭಾವದಿಂದ ರಾಜಮೌಳಿ ಅವರು ನನ್ನನ್ನು ಅರ್ಥಮಾಡಿಕೊಳ್ಳುತ್ತಿರಲಿಲ್ಲ. ಪತ್ರದಲ್ಲಿ ಇಷ್ಟು ಬರೆದು ವಿಡಿಯೋ ಕೂಡ ಬಿಡುಗಡೆ ಮಾಡಿದ್ದರೂ ಪುರಾವೆ ನೀಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಅದು ನಮ್ಮ ಮೂವರ ನಡುವೆ ಮಾತ್ರ ನಡೆದ ಸಂಗತಿ ಆಗಿತ್ತು ಎಂದು ಹೇಳಿದ್ದಾರೆ.
ಡೆತ್‌ನೋಟ್ ಬರೆದು ಸೆಲ್ಫಿ ವಿಡಿಯೋ ಮಾಡಿರುವ ಶ್ರೀನಿವಾಸ್ ರಾವ್ ಅವರು ಆತ್ಮಹತ್ಯೆಗೆ ಶರಣಾಗಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಪತ್ರ ಬರೆದು, ಸೆಲ್ಫಿ ವಿಡಿಯೋ ಮಾಡಿರುವ ಶ್ರೀನಿವಾಸ್ ರಾವ್ ನಾಪತ್ತೆಯಾಗಿದ್ದಾರೆ. ತಮ್ಮ 34 ವರ್ಷದ ಆಪ್ತ ಸ್ನೇಹಿತ ಶ್ರೀನಿವಾಸ್ ರಾವ್ ಆರೋಪದ ಬಗ್ಗೆ ಎಸ್.ಎಸ್ ರಾಜಮೌಳಿ ಇನ್ನೂ ಪ್ರತಿಕ್ರಿಯಿಸಿಲ್ಲ. ಸದ್ಯ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ.