‘ರವಿ ಬೋಪಣ್ಣ’ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ-ನಿರ್ದೇಶಕ ರವಿಚಂದ್ರನ್ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗಿದ್ದಾರೆ. ಈ ಬಾರಿ, ಅವರು ಸುಪ್ರೀತ್ ನಿರ್ದೇಶನದ ‘ಪ್ಯಾರ್’ ಚಿತ್ರದಲ್ಲಿ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರವನ್ನು ಎಸ್‌ಎಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಾಗಶ್ರೀ ನಿರ್ಮಿಸಿದ್ದು, ತಂದೆ ಮತ್ತು ಮಗಳ ನಡುವಿನ ಬಾಂಧವ್ಯದ ಕುರಿತು ಹೇಳುತ್ತದೆ.
ರವಿಚಂದ್ರನ್ ಜೊತೆ ಹೊಸಬರಾದ ಭರತ್ ಮತ್ತು ರಶಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ರವಿಚಂದ್ರನ್, ‘ಈ ಪಾತ್ರಕ್ಕಾಗಿ ಚಿತ್ರತಂಡ ನನ್ನನ್ನು ಸಂಪರ್ಕಿಸಿತು. ಚಿತ್ರದ ಮೇಲಿನ ಅವರ ಪ್ರೀತಿ ಮತ್ತು ಉತ್ಸಾಹವನ್ನು ಕಂಡು ನಾನು ಪ್ಯಾರ್‌ನ ಭಾಗವಾಗಲು ನಿರ್ಧರಿಸಿದೆ. ಈ ಚಿತ್ರವು ನಿಜವಾದ ಪ್ರೀತಿಯ ಸಾರ ಮತ್ತು ಅದು ಬೇಡುವ ತ್ಯಾಗಗಳನ್ನು ಸೆರೆಹಿಡಿಯುತ್ತದೆ. ನಾನು ನಾಯಕಿಯ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಮತ್ತು ಇದು ನನ್ನ ಹೃದಯಕ್ಕೆ ಪ್ರಿಯವಾದ ಪಾತ್ರ. ಒಬ್ಬ ನಟನಾಗಿ, ನಿರ್ದೇಶಕ ಸುಪ್ರೀತ್ ಈ ಪಾತ್ರದಲ್ಲಿ ನನ್ನ ಅಭಿನಯಕ್ಕೆ ಒಂದು ರೂಪ ಕೊಡುತ್ತಾರೆ ಎಂದು ನಾನು ನಂಬುತ್ತೇನೆ’ ಎಂದು ಹೇಳಿದರು.
ನಿರ್ಮಾಪಕಿ ನಾಗಶ್ರೀ ಮತನಾಡಿ, ‘ನಮ್ಮ ಚಿತ್ರದಲ್ಲಿ ರವಿ ಸರ್ ಅವರಿರುವುದು ನನ್ನ ಕನಸು ನನಸಾದ ಕ್ಷಣ. ನಾನು ನಿರ್ದೇಶನದ ಆಕಾಂಕ್ಷೆಯೊಂದಿಗೆ ಚಿತ್ರರಂಗಕ್ಕೆ ಬಂದೆ ಮತ್ತು ನಮ್ಮ ಯೋಜನೆಯಲ್ಲಿ ಅಂತಹ ದೊಡ್ಡ ನಟ ಇರುವುದು ಹೆಮ್ಮೆಯ ವಿಚಾರ. ಚಿತ್ರದಲ್ಲಿನ ತಂದೆ ಪಾತ್ರವು ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇದು ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿದೆ’ ಎಂದರು.
ಪ್ಯಾರ್ ಈಗಾಗಲೇ ಶೇ 80 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ನಿರ್ದೇಶಕ ಸುಪ್ರೀತ್ ಮಾತನಾಡಿ, ‘ನಾವು ತಂದೆ ಮತ್ತು ಮಗಳ ನಡುವಿನ ಸಂಬಂಧದ ಆಳವನ್ನು ಅನ್ವೇಷಿಸಲು ಬಯಸಿದ್ದೇವೆ. ಪ್ಯಾರ್‌ನಲ್ಲಿ, ಮಗಳು ತನ್ನ ತಂದೆಯ ಮೇಲಿನ ಪ್ರೀತಿ ಮತ್ತು ತ್ಯಾಗ ಕಥೆಯ ಮೂಲವಾಗಿದೆ. ಚಿತ್ರವು ರೂಪುಗೊಳ್ಳುತ್ತಿರುವ ಬಗ್ಗೆ ನಮಗೆ ಹೆಮ್ಮೆಯಿದೆ’ ಎಂದು ತಿಳಿಸಿದರು.