ಹೊಸಬರೇ ಸೇರಿಕೊಂಡು ನಿರ್ಮಿಸುತ್ತಿರುವ ‘ಸರ್ವೇ ನಂಬರ್ 45’ ಚಿತ್ರಕ್ಕೆ ಶಿವಕುಮಾರ್ ಎಂ ಶೆಟ್ಟಿಹಳ್ಳಿ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಮೂಲಕ ಸ್ಯಾಂಡಲ್’ವುಡ್’ಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.
ಭೂಮಿ, ಜಾಗಕ್ಕೆ ಸರ್ವೇ ನಂಬರ್ ಎಂದು ಸರ್ಕಾರವು ನೀಡಿರುತ್ತದೆ. ಇದಕ್ಕೆ ಸಂಬಂಧಿಸಿದ ಕಥೆ ಚಿತ್ರದ್ದಾಗಿದೆ. ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ. ಒಳಿತನ್ನು ಬಯಸಿದರೆ ಒಳ್ಳೆಯದೇ ಆಗುತ್ತದೆ ಎಂಬ ಸಂದೇಶವನ್ನು ಚಿತ್ರತಂಡ ನೀಡಲು ಹೊರಟಿದೆ.
ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಮೈಸೂರು, ಹಾಸನ, ಮಂಡ್ಯದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲು ಚಿತ್ರತಂಡ ಯೋಜನೆ ರೂಪಿಸಿದೆ.ವಾರಣಾದಿ ಸಿನಿ ಬ್ಯಾನರ್ ನಿರ್ಮಿಸಿರುವ ಈ ಚಿತ್ರದಲ್ಲಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗಿಲ್ಲಿ ನಟ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲನಟಿಯಾಗಿ ಫೇಮಸ್ ಆಗಿದ್ದ ರೀಯಾ ಭಾಸ್ಕರ್ ಅವರು ಗೌಡರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ.
ಜಗದೀಶ್ ಕೊಪ್ಪ, ಮುನಿ, ಸಂಜಯ್ ಪಾಟೀಲ್, ಟೋನಿತಾ, ಮೈತ್ರಿ, ರಾಜವ್ ಬಾಲೆ, ತೇಜು ಮೈಸೂರು, ಪ್ರಕಾಶ್ ಬಾನಾಳು, ಸುರೇಶ್ ಕೋಲಾರ, ರಂಗರಾಜು ಹುಲಿದುರ್ಗ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಚಕ್ರಿ ಕಿರಿಸಾವೆ ಸಂಭಾಷಣೆ ಬರೆದಿದ್ದರೆ, ವಿಶಾಲ್ ಆಲಾಪ್ ಅವರು ಸಂಗೀತ ನೀಡುತ್ತಿದ್ದಾರೆ. ದೀಪಕ್ ಕುಮಾರ್ ಜಿ.ಕೆ. ಅವರು ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.