ದಾಖಲೆ ಬರೆದು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ‘ಡೆವಿಲ್’ ದರ್ಶನ್; ಇನ್ನು ಸೆಲೆಬ್ರೇಷನ್ ಕೇಳ್ಬೇಕಾ?

Spread the love

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಬೆಳ್ಳಂಬೆಳಗ್ಗೆ 6 ಗಂಟೆಗೆ ತೆರೆಮೇಲೆ ಧನುಷ್ ಆರ್ಭಟ ಶುರುವಾಗಿದೆ. ಬಿಡುಗಡೆಗೂ ಮೊದಲೇ ಸಿನಿಮಾ ಹೊಸ ದಾಖಲೆ ಬರೆದಿದೆ. ಇನ್ನು ರಾಜ್ಯಾದ್ಯಂತ ಚಿತ್ರಮಂದಿರಗಳ ಆವರಣದಲ್ಲಿ ಸಂಭ್ರಮಾಚರಣೆ ಜೋರಾಗಿದೆ.ನಗರದ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಶುರುವಾಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಆಪ್ತ ಧನ್ವೀರ್ ಗೌಡ ಅಭಿಮಾನಿಗಳ ಜೊತೆ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ದೊಡ್ಡಮಟ್ಟದಲ್ಲಿ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿದೆ. ನೂರಾರು ಅರ್ಲಿ ಮಾರ್ನಿಂಗ್ ಶೋಗಳಲ್ಲಿ ಅಭಿಮಾನಿಗಳು ಸಿನಿಮಾ ನೋಡಿದ್ದಾರೆಶನಿವಾರವೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಮೊದಲ ದಿನವೇ ದಾಖಲೆ ಮಟ್ಟದಲ್ಲಿ ಟಿಕೆಟ್ ಬುಕ್ ಆಗಿತ್ತು. ಬರೀ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ 7 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆ ಮೂಲಕ ‘ಡೆವಿಲ್’ ಹೊಸ ದಾಖಲೆ ಬರೆದಿದ್ದಾನೆ. ‘KGF-2’ ಹಾಗೂ ‘ಕಾಂತಾರ-1’ ಬಳಿಕ ಇದು ಹೊಸ ದಾಖಲೆ ಎನ್ನಲಾಗ್ತಿದೆ. ನಟ ದರ್ಶನ್ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆಯಾಗಿದೆ. ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಿನಿಮಾ ನೋಡಿ ಗೆಲ್ಲಿಸಲು ಮನಸ್ಸು ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಸೆಲೆಬ್ರೇಷನ್ ಜೋರಾಗಿದೆ. ಕೆಜಿ ರಸ್ತೆಯ ನರ್ತಕಿ, ಮಾಗಡಿ ರಸ್ತೆಯ ಪ್ರಸನ್ನ, ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಚಿತ್ರದುರ್ಗ, ಮೈಸೂರು ಸೇರಿದಂತೆ ‘ಡೆವಿಲ್’ ಸಿನಿಮಾ ಬಿಡುಗಡೆಯಾಗಿರುವ ಬಹುತೇಕ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಮಾಡಿ ಚಿತ್ರವನ್ನು ಸ್ವಾಗತಿಸಿದ್ದಾರೆ. ಕಟೌಟ್ ನಿಲ್ಲಿಸಿ, ಹಾರ ಹಾಕಿ, ಪಟಾಕಿ ಸಿಡಿಸಿ ಜೈಕಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಗುರುವಾರ ಬೆಳಗಿನ ಜಾವ 5 ಗಂಟೆ ವೇಳೆಗೆ ಅಂದ್ರೆ ‘ಡೆವಿಲ್’ ಚಿತ್ರದ ಮೊದಲ ಪ್ರದರ್ಶನ ಆರಂಭಕ್ಕೂ ಮುನ್ನ 2 ಲಕ್ಷದ 73 ಸಾವಿರ ಟಿಕೆಟ್ ಬುಕ್ ಆಗಿತ್ತು. ಆ ಮೂಲಕ 7 ಕೋಟಿ 68 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಬರೀ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಈ ಪಾಟಿ ಕಲೆಕ್ಷನ್ ಆಗಿರುವುದು ವಿಶೇಷ. ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಬಂದ್ರೆ ಸಂಜೆ ವೇಳೆಗೆ ಕಲೆಕ್ಷನ್ ಹೆಚ್ಚಲಿದೆ. ಆ ಮೂಲಕ ಮೊದಲ ದಿನವೇ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ. ಮೊದಲ ದಿನ ರಾಜ್ಯಾದ್ಯಂತ 2120 ಶೋಗಳಲ್ಲಿ ‘ಡೆವಿಲ್’ ಸಿನಿಮಾ ಪ್ರದರ್ಶನವಾಗುತ್ತಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಮಾಲ್‌ಗಳಲ್ಲಿ ತಡವಾಗಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಕೊಂಚಮಟ್ಟಿಗೆ ಹಿನ್ನೆಡೆ ಉಂಟು ಮಾಡಿದ್ದು ಸುಳ್ಳಲ್ಲ. ಫ್ಯಾಮಿಲಿ ಆಡಿಯನ್ಸ್ ಕೈ ಜೋಡಿಸಿದರೆ ಸಿನಿಮಾ ಹಿಟ್ ಲಿಸ್ಟ್ ಸೇರುವುದು ಗ್ಯಾರಂಟಿ. ನರ್ತಕಿ ಜೊತೆಗೆ ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಕೂಡ ‘ಡೆವಿಲ್’ ಆರ್ಭಟ ಶುರುವಾಗಿದೆ. ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ ಸಿನಿಮಾ ಇದು. 30 ಕೋಟಿ ರೂ.ಗೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಡೆವಿಲ್ ಹಾಗೂ ಧನುಷ್ ಆಗಿ ಚಿತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ಕಾಲಾವಧಿ 2 ಗಂಟೆ 49 ನಿಮಿಷ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಈ ಸಿನಿಮಾ ಗೆಲುವು ಬಹಳ ಅವಶ್ಯಕವಾಗಿದೆ.

Leave a Reply

Your email address will not be published. Required fields are marked *