ಲೋಕೇಶ್ ಕನಕರಾಜ್ ನಿರ್ದೇಶನದ, ಸೂಪರ್ ಸ್ಟಾರ್ ರಜನಿಕಾಂತ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಮುಂದಿನ ಆಕ್ಷನ್ ಚಿತ್ರ ‘ಕೂಲಿ’ಯಲ್ಲಿ ಪೂಜಾ ಹೆಗ್ಡೆ ಸೊಂಟ ಬಳುಕಿಸಲಿದ್ದಾರೆ.
ಗುರುವಾರ ಬೆಳಗ್ಗೆ ಚಿತ್ರ ನಿರ್ಮಾಣ ಮಾಡುತ್ತಿರುವ ಸನ್ ಪಿಕ್ಚರ್ಸ್, ನಟಿ ಪೂಜಾ ಹೆಗ್ಡೆ ಅವರು ಚಿತ್ರದಲ್ಲಿ ವಿಶೇಷ ನೃತ್ಯವನ್ನು ಮಾಡಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸನ್ ಪಿಕ್ಚರ್ಸ್, “ಹೌದು, ನೀವು ಸರಿಯಾಗಿ ಊಹಿಸಿದ್ದೀರಿ! ಕೂಲಿ ಸೆಟ್‌ನಿಂದ ಹೆಗ್ಡೆಪೂಜಾ ಎಂದು ಬರೆದುಕೊಂಡಿದೆ. ಮೂಲಗಳ ಪ್ರಕಾರ ಕೂಲಿ ಚಿತ್ರೀಕರಣ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ.
ಆಕ್ಷನ್ ಥ್ರಿಲ್ಲರ್ ಆಗಿರುವ ‘ಕೂಲಿ’ ಚಿತ್ರದಲ್ಲಿ ತೆಲುಗು ಸ್ಟಾರ್ ನಾಗಾರ್ಜುನ, ಕನ್ನಡದ ಸ್ಟಾರ್ ಉಪೇಂದ್ರ, ಸೌಬಿನ್ ಶಾಹಿರ್, ಸತ್ಯರಾಜ್ ಸೇರಿದಂತೆ ಹಲವಾರು ಟಾಪ್ ಸ್ಟಾರ್‌ಗಳು ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ನಟಿ ಶ್ರುತಿ ಹಾಸನ್, ರೆಬೆ ಮೋನಿಕಾ ಜಾನ್ ಮತ್ತು ಜೂನಿಯರ್ ಎಂಜಿಆರ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣವಿದೆ. ಫಿಲೋಮಿನ್ ರಾಜ್ ಸಂಕಲನ ಮಾಡುತ್ತಿರುವ ಈ ಚಿತ್ರವನ್ನು ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ.