ಚೆನ್ನೈ: ಖ್ಯಾತ ತಮಿಳು ನಟ ಜಯಂ ರವಿ ವಿಚ್ಛೇದನ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್ ದೊರೆತಿದ್ದು, ವಿಚ್ಛೇದನದ ಕುರಿತ ಸಾರ್ವಜನಿಕ ಪ್ರಕಟಣೆಗೆ ನನ್ನ ಒಪ್ಪಿಗೆಯನ್ನೇ ಪಡೆದಿಲ್ಲ ಎಂದು ಪತ್ನಿ ಆರತಿ ರವಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ನಟ ಜಯಂ ರವಿ ಅವರು ತಮ್ಮ ಮಾಜಿ ಪತ್ನಿ ಆರತಿ ರವಿಯಿಂದ ವಿಚ್ಛೇದನ ಮತ್ತು ಪ್ರತ್ಯೇಕ ಜೀವನವನ್ನು ಅಧಿಕೃತವಾಗಿ ಘೋಷಿಸಿದ್ದರು. ಇದೀಗ ಈ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್ ದೊರೆತಿದ್ದು, ವಿಚ್ಛೇದನದ ಕುರಿತ ಸಾರ್ವಜನಿಕ ಪ್ರಕಟಣೆಗೆ ನನ್ನ ಒಪ್ಪಿಗೆಯನ್ನೇ ಪಡೆದಿಲ್ಲ ಎಂದು ಪತ್ನಿ ಆರತಿ ರವಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಆರತಿ ರವಿ, ‘ತಮ್ಮ ವಿಚ್ಚೇದನದ ಕುರಿತು ಸಾರ್ವಜನಿಕ ಪ್ರಕಟಣೆಯನ್ನು ತನ್ನ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಮಾಡಲಾಗಿದೆ. ಇದು ನಿಜಕ್ಕೂ ಆಘಾತಕಾರಿ ಎಂದು ಹೇಳಿದ್ದಾರೆ.ಅಂತೆಯೇ “ನಮ್ಮ ಮದುವೆಯ ಬಗ್ಗೆ ಇತ್ತೀಚಿನ ಸಾರ್ವಜನಿಕ ಪ್ರಕಟಣೆಯಿಂದ ನಾನು ತುಂಬಾ ಆಘಾತಕ್ಕೊಳಗಾಗಿದ್ದೇನೆ. ಅದು ನನ್ನ ಅರಿವಿಲ್ಲದೆ ಅಥವಾ ಒಪ್ಪಿಗೆಯಿಲ್ಲದೆ ಮಾಡಲ್ಪಟ್ಟಿದೆ. 18 ವರ್ಷಗಳ ಸಂಸಾರದ ನಂತರ, ಅಂತಹ ಮಹತ್ವದ ವಿಷಯವನ್ನು ಅದಕ್ಕೆ ಅರ್ಹವಾದ ಅನುಗ್ರಹ, ಗೌರವ ಮತ್ತು ಗೌಪ್ಯತೆಯಿಂದ ನಿರ್ವಹಿಸಬೇಕು ಎಂದು ನಾನು ನಂಬುತ್ತೇನೆ. ನಮ್ಮ ಮದುವೆಯಿಂದ ಹೊರಬರುವ ನಿರ್ಧಾರವು ಸಂಪೂರ್ಣವಾಗಿ ಏಕಪಕ್ಷೀಯವಾಗಿದ್ದು, ನಮ್ಮ ಕುಟುಂಬಕ್ಕೆ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಸಂಧಾನಕ್ಕೆ ಮುಂದಾಗಿದ್ದ ಆರತಿ ರವಿ
ಮೂಲಗಳ ಪ್ರಕಾರ ವಿಚ್ಛೇದನ ನಿರ್ಧಾರ ಹಿಂಪಡೆಯುವ ವಿಚಾರವಾಗಿ ಆರತಿ ರವಿ ಅವರು ನಟ ಜಯಂ ರವಿ ಅವರನ್ನು ಮನ ವೊಲಿಸಲು ಸಾಕಷ್ಟು ಯತ್ನಿಸಿದ್ದರು ಎಂದು ಹೇಳಲಾಗಿದೆ. ತಮಗೆ ಸಿಕ್ಕ ಎಲ್ಲ ಅವಕಾಶಗಳಲ್ಲೂ ಜಯಂ ರವಿ ಅವರೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದರು. ಆದರೆ ಅವರಿಗೆ ಜಯಂ ರವಿ ಯಾವುದೇ ಅವಕಾಶ ನೀಡಿಲ್ಲ. ಜಯಂ ರವಿ ನನ್ನ ಒಪ್ಪಿಗೆಯಿಲ್ಲದೆ ವಿಚ್ಛೇದನ ಘೋಷಣೆ ಮಾಡಿದ್ದಾರೆ ಎಂದು ಆರತಿ ರವಿ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.
ಮದುವೆಯಾಗಿ 18 ವರ್ಷಗಳ ಬಳಿಕ ನಟ ಜಯಂ ರವಿ ಇತ್ತೀಚೆಗೆ ತಮ್ಮ ಪತ್ನಿ ಆರತಿ ರವಿಯಿಂದ ಬೇರ್ಪಟ್ಟಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದರು.