ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಬಗ್ಗೆ ಕನ್ನಡದ ಖ್ಯಾತ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ. ತಿದ್ದಿಕೊಂಡು ನಿನ್ನೆಯ ದರ್ಶನ್ ಆಗಲು ಅವರಿಗೆ ಅವಕಾಶವಿದೆ’ ಎಂದಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಗೊತ್ತಿರುವ ವ್ಯಕ್ತಿ ತಪ್ಪು ಮಾಡಿದಾಗ, ಆ ವ್ಯಕ್ತಿ ಗೊತ್ತು ಎನ್ನುವ ಕಾರಣಕ್ಕೆ ಆ ತಪ್ಪನ್ನು ತಪ್ಪು ಅಲ್ಲ ಎನ್ನಲು ಸಾಧ್ಯವಿಲ್ಲ. ಹಾಗೆಯೇ ತಪ್ಪು ಎನ್ನುವ ಒಂದೇ ಕಾರಣಕ್ಕೆ ಆ ವ್ಯಕ್ತಿಯೇ ಗೊತ್ತಿಲ್ಲ ಎನ್ನಲೂ ಸಾಧ್ಯವಿಲ್ಲ. ನಾವು ಕಲಾವಿದರಾಗಿ ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದ್ದೇವೆ’ ಎಂದಿದ್ದಾರೆ ರಮೇಶ್ ಅರವಿಂದ್.
ನನಗೆ ಮೂವರು ದರ್ಶನ್ ಕಾಣುತ್ತಾರೆ. ಓರ್ವ ಅಪಾರ ಮನರಂಜನೆ ಕೊಟ್ಟ, ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಸೂಪರ್ ಸ್ಟಾರ್. ಇನ್ನೂ ಇವತ್ತಿನ ದರ್ಶನ್ ಓರ್ವರು. ವೀಕೆಂಡ್ ವಿತ್ ರಮೇಶ್‌ನಲ್ಲಿ ಆ ದರ್ಶನ್ ನೋಡಿದ್ದೆ, ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಒಂದು ದೊಡ್ಡ ತಪ್ಪಾಗಿದೆ. ತಪ್ಪು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆ ಆಗಲೇಬೇಕು. ಕಾನೂನು ಪ್ರಕಾರ ಎಲ್ಲವೂ ನಡೆಯಲಿದೆ. ಎಲ್ಲದಕ್ಕಿನ್ನ ಹೆಚ್ಚಾಗಿ ಮತ್ತೋರ್ವ ದರ್ಶನ್, ನಾಳೆಯ ದರ್ಶನ್ ಅವರನ್ನು ನಾವು ನೋಡಬೇಕಿದೆ. ಹೊರಗೆ ಬಂದ ಬಳಿಕ ಹೊಸ ದರ್ಶನ್ ಅವರನ್ನು ನೋಡುತ್ತೇವೆ. ಅದು ಬಹಳ ಇಂಟ್ರೆಸ್ಟಿಂಗ್ ಆಗಿರಲಿದೆ. ನೋ ಯೂ ಟರ್ನ್ ಅನ್ನೋ ಬೋರ್ಡ್ ಇರೋದು ರಸ್ತೆಯಲ್ಲಿ ಮಾತ್ರ. ಬದುಕಲ್ಲಿ ಅಲ್ಲ. ಯಾವಾಗ ಬೇಕಾದ್ರೂ ಯೂ ಟರ್ನ್ ಮಾಡಿ ಗೆಲ್ಲಬಹುದು. ಹಳೆಯ ಸೂಪರ್ ಸ್ಟಾರ್ ದರ್ಶನ್ ಆಗಿ ನೋಡಬೇಕು ಅನ್ನೋದು ನಮ್ಮ ಆಸೆ, ಕಾದು ನೋಡೋಣ ಎಂದು ಜಾಣ್ಮೆಯ ಉತ್ತರಗಳನ್ನು ಕೊಟ್ಟರು.