ಫ್ರೆಂಡ್ಸ್, ಜಾಲಿ ಡೇಸ್, ಕೃಷ್ಣ, ಚೆಲ್ಲಾಟ, ಪೊರ್ಖಿ, ಬುಲ್ ಬುಲ್, ಬುಗುರಿ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಜನಪ್ರಿಯ ನಿರ್ದೇಶಕ ಎಂ.ಡಿ. ಶ್ರೀಧರ್ ಒಂದು ವಿರಾಮದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಎಂ.ಡಿ. ಶ್ರೀಧರ್ ‘ಜಂಬೂ ಸರ್ಕಸ್’ ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಒಡೆಯ ನಂತರ 5 ವರ್ಷಗಳ ವಿರಾಮ ತೆಗೆದುಕೊಂಡಿದ್ದ ಶ್ರೀಧರ್ ಅವರು, ಜಂಬೂ ಸರ್ಕಸ್ ಚಿತ್ರಕ್ಕೆ ಆ್ಯಕ್ಷನ್- ಕಟ್ ಹೇಳಿದ್ದಾರೆ. ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಸಿ. ಸುರೇಶ್ ಮಹತಿ ಕಂಬೈನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರವೀಣ್ ತೇಜ್ ಮತ್ತು ಅಂಜಲಿ ಅನೀಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆ ಸಮಾರಂಭದಲ್ಲಿ ಎಂ.ಡಿ.ಶ್ರೀಧರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸುದೀರ್ಘ ಪ್ರಯಾಣವನ್ನು ಮೆಲುಕು ಹಾಕಿದರು.
ಒಡೆಯ ನಂತರ ಗ್ಯಾಪ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ‘ಜಂಬೂ ಸರ್ಕಸ್’ ಸಿನಿಮಾ ಆಗಲು ಕಾರಣ ನಿರ್ಮಾಪಕರು. ಮದುವೆ ಕಾರ್ಯಕ್ರಮವೊಂದರಲ್ಲಿ ಹೆಚ್.ಸಿ. ಸುರೇಶ್ ಅವರು ಸಿಕ್ಕಿದ್ದರು. ಆಗ ಒಂದು ಲೈನ್ ಹೇಳಿ ನಮಗೊಂದು ಸಿನಿಮಾ ಮಾಡಿಕೊಡಿ ಎಂದರು. ನಿರ್ಮಾಪಕರು ಕೆಲ ವರ್ಷಗಳ ಹಿಂದೆ ಬೇರೆ ಸಿನಿಮಾಗಾಗಿ ಅಡ್ವಾನ್ಸ್ ಕೊಟ್ಟಿದ್ದರು. ಆ ಚಿತ್ರ ಆಗಿರಲಿಲ್ಲ. ಆ ಕಮಿಟ್‌ಮೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇವೆ. ಪ್ರಾರಂಭದಲ್ಲಿ ನಿರ್ಮಾಪಕರಿಗೆ ಪಾರ್ಟನರ್ ಇದ್ದರು. ಅವರು ನಡುವೆ ಕೈ ಕೊಟ್ಟರು. ಹಾಗಾಗಿ ಸುರೇಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಗೆದ್ದರೆ ಅವರು ಇನ್ನಷ್ಟು ಸಿನಿಮಾ ಮಾಡುತ್ತಾರೆ.