ಅದ್ಧೂರಿ ಮೇಕಿಂಗ್ ಹಾಗೂ ಸ್ಟೈಲಿಷ್ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರು, ಸದ್ಯ ಗೌರಿ ಚಿತ್ರದ ಮೂಲಕ ಪುತ್ರ ಸಮರ್ಜಿತ್ ಲಂಕೇಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳಿಂದಲೇ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿರುವ ಈ ಚಿತ್ರ ಆಗಸ್ಟ್ 15ಕ್ಕೆ ಬಿಡುಗಡೆಯಾಗುತ್ತಿದೆ.
ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚಿತ್ರತಂಡ ‘ಗೌರಿ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕನ್ನಡದ ಯುವ ಪ್ರತಿಭೆಗಳನ್ನು ಬೆಳೆಸಿ. ಆಗಸ್ಟ್ 15 ಒಳ್ಳೆಯ ದಿನ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಇದು. ಎಲ್ಲಾ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಇನ್ನು ಇದೇ ದಿನ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಯಾಣ ಸಖಿ ಮತ್ತು ದಿಗಂತ್ ಅಭಿನಯದ ಪೌಡರ್ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ.
ಗೌರಿ ಚಿತ್ರಕ್ಕೆ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ಧ್ ಶಾಸ್ತ್ರಿ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ರೀ ರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ್ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ, ಪ್ರಜ್ಞಾ ಮರಾಠೆ, ಸಮರ್ಜಿತ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ.
ಸಮರ್ಜಿತ್ ಲಂಕೇಶ್ ಜೊತೆ ಸಾನ್ಯಾ ಅಯ್ಯರ್ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇವರೊಂದಿಗೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್ ಮೈತ್ರೇಯಾ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಎ.ಜೆ.ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ.