ಕೆಜಿಎಫ್ ಮೂಲಕ ಮನೆಮಾತಾದ ಸಂಗೀತ ನಿರ್ದೇಶಕ ರವಿ ಬಸ್ರೂರು ಸದ್ಯ ಬಹು ಬೇಡಿಕೆಯ ಮ್ಯೂಸಿಕ್ ಡೈರೆಕ್ಟರ್. ಜೂನಿಯರ್ NTR – ಪ್ರಶಾಂತ್ ನೀಲ್ ಅವರ ಮುಂಬರುವ ಚಿತ್ರ ಸೇರಿದಂತೆ ಅನೇಕ ಹೈ ಪ್ರೊಫಲ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
ಶಿವರಾಜಕುಮಾರ್ ಅಭಿನಯದ ಮತ್ತು ನರ್ತನ್ ನಿರ್ದೇಶನದ ಬಹು ನಿರೀಕ್ಷಿತ ಭೈರತಿ ರಣಗಲ್ ಚಿತ್ರದ ರೀ- ರೆಕಾರ್ಡಿಂಗ್ ಪ್ರಕ್ರಿಯೆಯಲ್ಲಿ ರವಿ ನಿರತರಾಗಿದ್ದಾರೆ. ಮಫ್ತಿಗೆ ಫ್ರೀಕ್ವೆಲ್ ಆಗಿರುವ ಭೈರತಿ ರಣಗಲ್ ಸಿನಿಮಾ ಈಗಾಗಲೇ ಅಪಾರವಾದ ಬಝ್ ಸೃಷ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಅದರ ಶೀರ್ಷಿಕೆ ಹಾಡು ಆನಂದ್ ಆಡಿಯೊದಲ್ಲಿ ಲಭ್ಯವಿದ್ದು, ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
ಈ ಹಾಡು ಶಿವರಾಜಕುಮಾರ್ ಅವರ ಮಫ್ತಿಯಲ್ಲಿನ ಅವರ ಅಪ್ರತಿಮ ಪಾತ್ರವನ್ನು ನೆನಪಿಸುತ್ತದೆ. ಕಿನ್ನಲ್ ರಾಜ ಸಾಹಿತ್ಯ ಬರೆದಿದ್ದು ಸಂತೋಷ್ ವೆಂಕಿ ಧ್ವನಿ ನೀಡಿದ್ದಾರೆ, ಈ ಟ್ರ್ಯಾಕ್ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆದಿದೆ. ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ, ರವಿ ಬಸ್ರೂರ್, ತಮ್ಮ ಮೊದಲ ಬಾರಿಗೆ ಶಿವರಾಜಕುಮಾರ್ ಚಿತ್ರಕ್ಕೆ ಪೂರ್ಣಪ್ರಮಾಣದಲ್ಲಿ ಸಂಗೀತ ಸಂಯೋಜಿಸಿರುವುದಾಗಿ ತಿಳಿಸಿದ್ದಾರೆ. “ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವಾಗ, ನಿರ್ದೇಶಕರ ದೃಷ್ಟಿಕೋನ ಮತ್ತು ನಟರ ಅಸ್ತಿತ್ವ ಅರ್ಥಮಾಡಿಕೊಳ್ಳುವುದು ಅತ್ಯಗತ್ಯ” ಎಂದು ಅವರು ಹೇಳುತ್ತಾರೆ.
ಮಫ್ತಿಯ ಪ್ರೀಕ್ವೆಲ್ ಭೈರತಿ ರಣಗಲ್‌ಗಾಗಿ, ನಾವು ಹೊಸ ಜಗತ್ತನ್ನು ರೂಪಿಸುವಾಗ ಮೂಲ ಚಿತ್ರದ ಒಟ್ಟಾರೆ ಸಾರಾಂಶ ಸೆರೆಹಿಡಿಯಬೇಕಾಗಿತ್ತು. ಶಿವರಾಜಕುಮಾರ್ ಅವರ ಜೀವನಕ್ಕಿಂತ ದೊಡ್ಡ ವ್ಯಕ್ತಿತ್ವವನ್ನು ಆಚರಿಸಬೇಕಾಗಿದೆ. ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಶೀರ್ಷಿಕೆ ಗೀತೆಯು ಚಿತ್ರದ ಅತೀಂದ್ರಿಯತೆಯನ್ನು ಕಾಪಾಡುತ್ತದೆ ಎಂದಿದ್ದಾರೆ. ಹಾಡು ಶಿವರಾಜಕುಮಾರ್ ಅವರ ವರ್ಚಸ್ಸನ್ನು ಎತ್ತಿ ತೋರಿಸುತ್ತದೆ. ಅವರ ಕಣ್ಣುಗಳು ವಿಸ್ಮಯಕಾರಿ ಅಂಶ ಅಭಿವ್ಯಕ್ತವಾಗಿವೆ, ನಾವು ಇದನ್ನು ಹಿನ್ನೆಲೆ ಸಂಗೀತದ ಮೂಲಕ ತಿಳಿಸಿದ್ದೇವೆ ಎಂದಿದ್ದಾರೆ.
ರವಿ ಬಸ್ರೂರ್ ಮೂರು ಹಾಡುಗಳನ್ನು ಸಂಯೋಜಿಸಿದ್ದಾರೆ, ಪ್ರತಿಯೊಂದನ್ನು ಚಿತ್ರದಲ್ಲಿ ನಿರ್ದಿಷ್ಟ ಕ್ಷಣಗಳನ್ನು ನಿಖರವಾಗಿ ರಚಿಸಲಾಗಿದೆ. “ಸಾಮಾನ್ಯವಾಗಿ, ಸಂಭಾಷಣೆಯ ಮೂಲಕ ಸಂಪೂರ್ಣವಾಗಿ ವಿವರಿಸಲಾಗದ ಕಥೆಯ ಅಂಶಗಳನ್ನು ತಿಳಿಸಲು ಚಲನಚಿತ್ರದಲ್ಲಿನ ಹಾಡುಗಳು ಸಹಾಯ ಮಾಡುತ್ತದೆ. ಉಳಿದ ಎರಡು ಹಾಡುಗಳು ಸಂದರ್ಭೋಚಿತವಾಗಿದ್ದು, ಚಿತ್ರದ ನಿರೂಪಣೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದಿದ್ದಾರೆ.
ವೇದ ಸಿನಿಮಾ ನಂತರ ಗೀತಾ ಪಿಕ್ಚರ್ಸ್ ನಿರ್ಮಿಸಿದ ಎರಡನೇ ಸಿನಿಮಾ ಭೈರತಿ ರಣಗಲ್ . ಶಿವರಾಜಕುಮಾರ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಂಡಿರುವ ರುಕ್ಮಿಣಿ ವಸಂತ್ ವೈದ್ಯೆಯಾಗಿ ನಟಿಸಿದ್ದಾರೆ. ಬಾಲಿವುಡ್ ನಟ ರಾಹುಲ್ ಬೋಸ್ ಕನ್ನಡ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ಬಾಬು ಹಿರಣ್ಣಯ್ಯ ಸೇರಿದಂತೆ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣವಿದೆ, ಸದ್ಯ ಪೋಸ್ಟ್-ಪ್ರೊಡಕ್ಷನ್‌ನಲ್ಲಿರುವ ಭೈರತಿ ರಣಗಲ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.