ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರೀಗ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಹೊರಗಡೆ ಇರುವ ಪವಿತ್ರಾ ಗೌಡ ಅವರ ಏಕೈಕ ಮಗಳು ಖುಷಿ ಗೌಡ ಸಾಧ್ಯವಾದಾಗೆಲ್ಲ ಜೈಲಿಗೆ ಹೋಗಿ ತಾಯಿಯನ್ನು ನೋಡಿಕೊಂಡು ಬರುತ್ತಿದ್ದಾರೆ.. ಈಗ ಅವರು ಸೋಶಿಯಲ್ ಮೀಡಿಯಾ ಮೂಲಕ ತಾಯಿ ಬಗ್ಗೆ ಮಾತನಾಡಿದ್ದಾರೆ.
ಖುಷಿ ಗೌಡ ಪೋಸ್ಟ್ ಏನು?
“ತಾಯಿಯೇ ನನ್ನ ಸ್ಫೂರ್ತಿ, ಸಂದರ್ಭ ಏನೇ ಇರಲಿ ಅವಳು ನನಗೆ ಹೇಗೆ ಗಟ್ಟಿ ಆಗಿರಬೇಕು ಅಂತ ಹೇಳಿಕೊಟ್ಟಿದ್ದಾಳೆ. ಅವಳು ನನಗೆ ಎಂದಿಗೂ ಬೆಂಬಲವಾಗಿಯೇ ಇದ್ದಳು. ಅವಳು ನೂರು ಕೋಟಿಯಲ್ಲಿ ಒಬ್ಬಳು. ನನಗೆ ಅಂಥ ವ್ಯಕ್ತಿ ಸಿಗೋದಿಲ್ಲ. ಅವಳ ರೀತಿ ತಾಯಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಲವ್ ಯು ಅಮ್ಮಾ” ಎಂದು ಖುಷಿ ಗೌಡ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ತಾಯಿ ಉದ್ಯಮವನ್ನು ನೋಡಿಕೊಳ್ತಿರುವ ಖುಷಿ ಗೌಡ
ಪವಿತ್ರಾ ಗೌಡ ಅವರು ಜೈಲಿಗೆ ಹೋದಾಗಿನಿಂದ ಖುಷಿ ಗೌಡ ಅವರು ಆಗಾಗ ಜೈಲಿಗೆ ಹೋಗಿ ತಾಯಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಇನ್ನು ತಂದೆ ಸಂಜಯ್ ಸಿಂಗ್ ಬಳಿಯೂ ಮಾತನಾಡಿದ್ದ ಖುಷಿ ಗೌಡ, “ಧೈರ್ಯವಾಗಿರಿ, ಏನೂ ಆಗೋದಿಲ್ಲ, ನಾನು ಸ್ಟ್ರಾಂಗ್ ಆಗಿದ್ದೇನೆ” ಅಂತ ಹೇಳಿದ್ದರಂತೆ. ಸದ್ಯ ಅಜ್ಜ-ಅಜ್ಜಿ, ಮಾವನ ಆರೈಕೆಯಲ್ಲಿ ಬೆಳೆಯುತ್ತಿರುವ ಖುಷಿ ಗೌಡ ಅವರು ತಾಯಿಯ ‘ರೆಡ್ ಕಾರ್ಪೆಟ್ ಸ್ಟುಡಿಯೋ’ವನ್ನು ಕೂಡ ನೋಡಿಕೊಳ್ಳುತ್ತಿದ್ದಾರಂತೆ. 15 ವರ್ಷದ ಖುಷಿ ಗೌಡ ಅವರು ‘ರೆಡ್ ಕಾರ್ಪೆಟ್ ಸ್ಟುಡಿಯೋ’ದ ಹೊಸ ಡಿಸೈನರ್ ಬಟ್ಟೆಗಳನ್ನು ಅವರ ಅಕೌಂಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಏನಿದು ಪ್ರಕರಣ?
ಚಿತ್ರದುರ್ಗ ರೇಣುಕಾಸ್ವಾಮಿ ಅವರು ಫೇಕ್ ಅಕೌಂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದರು. ಅದು ನಟ ದರ್ಶನ್ ಕಿವಿ ತಲುಪಿತ್ತು. ಪವಿತ್ರಾ ಗೌಡ ಹಾಗೂ ದರ್ಶನ್ ಆತ್ಮೀಯರು. ದರ್ಶನ್ ಹೇಳಿಕೆ ಮೇರೆಗೆ ಆ ನಂತರ ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಅವರನ್ನು ಕರೆಸಲಾಗಿತ್ತು. ಜೂನ್ 8ರಂದು ರೇಣುಕಾಸ್ವಾಮಿ ಅವರ ಕೊಲೆ ಆಗಿದೆ. ಆಮೇಲೆ ರೇಣುಕಾಸ್ವಾಮಿ ಅವರ ಶವವನ್ನು ರಾಜಕಾಲುವೆಗೆ ಎಸೆಯಲಾಗಿತ್ತು. ಆ ನಂತರ ಇಬ್ಬರು ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿದ್ದೇವೆ ಎಂದು ಹೇಳಿದ್ದರು.ಪೊಲೀಸರು ವಿಚಾರಣೆ ಮಾಡಿದ ಬಳಿಕ ದರ್ಶನ್ ನಿರ್ದೇಶನದ ಮೇಲೆ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರಂತೆ. ಈ ಪ್ರಕರಣವನ್ನು ಇನ್ನಷ್ಟು ವಿಚಾರಣೆ ನಡೆಸಿದ ನಂತರದಲ್ಲಿ ಒಟ್ಟೂ 18 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಕೇಸ್‌ಗೆ ಸಂಬಂಧಪಟ್ಟಂತೆ ನಿತ್ಯವೂ ಒಂದಲ್ಲ ಒಂದು ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ಒಟ್ಟಿನಲ್ಲಿ ಪವಿತ್ರಾ ಗೌಡ ಅವರಿಗೆ ಜಾಮೀನು ಆಗತ್ತಾ? ಈ ಕೇಸ್‌ನಿಂದ ಮುಕ್ತರಾಗುತ್ತಾರಾ? ಇಲ್ಲವಾ? ಎಂದು ಕಾದು ನೋಡಬೇಕಿದೆ.