ನಟಿ ಪದ್ಮಜಾ ರಾವ್ ಗೆ ಸಂಕಷ್ಟ: ಚೆಕ್ ಬೌನ್ಸ್ ಪ್ರಕರಣದಲ್ಲಿ ಮೂರು ತಿಂಗಳು ಜೈಲುಶಿಕ್ಷೆ ವಿಧಿಸಿದ ನ್ಯಾಯಾಲಯ

Spread the love

ಮಂಗಳೂರು: ಚೆಕ್ ಬೌನ್ಸ್‌ ಪ್ರಕರಣದಲ್ಲಿ ಸಿನಿಮಾ ಹಾಗೂ ಧಾರಾವಾಹಿ ನಟಿ ಪದ್ಮಜಾ ರಾವ್‌ ಅವರಿಗೆ ಇಲ್ಲಿನ 8ನೇ ಜೆಎಂಎಫ್‌ಸಿ ನ್ಯಾಯಾಲಯವು ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷರು. ದಂಡ ವಿಧಿಸಿದೆ.

ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಎಂಬುವರು ತಮ್ಮಿಂದ 41ಲಕ್ಷ ರೂ. ಹಣ ಪಡೆದು, ಆ ಬಳಿಕ ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು 2021ರಲ್ಲಿ ನಟಿ ಪದ್ಮಜಾ ರಾವ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಗೆ ಪದ್ಮಜಾ ರಾವ್ ಅವರು ಚಾಲಿಪೋಲಿಲು ತುಳು ಸಿನಿಮಾದಲ್ಲಿ ನಟಿಸಲು ಬಂದ ಸಂದರ್ಭ ಪರಿಚಯವಾಗಿದ್ದರು. ಬಳಿಕ ವೀರೇಂದ್ರ ಶೆಟ್ಟಿಯವರ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ಹಂತ ಹಂತವಾಗಿ 41 ಲಕ್ಷ ರೂ. ಸಾಲವನ್ನು ಪಡೆದಿದ್ದರು. ಸಾಲದ ಭದ್ರತೆಗೆ ಅವರು 40 ಲಕ್ಷ ರೂ.ನ ಚೆಕ್ ನೀಡಿದ್ದರು‌. ಪದ್ಮಜಾ ರಾವ್ ಮನೆಯಿಂದ ಚೆಕ್‌ ಕಳವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ’ ಎಂದು ಪದ್ಮಜಾ ರಾವ್‌ ಪರ ವಕೀಲರು ವಾದಿಸಿದ್ದರು. ಆದರೆ, ಇದಕ್ಕೆ ಪೂರಕ ಪುರಾವೆಗಳನ್ನು ಒದಗಿಸುವಲ್ಲಿ ಅವರು ವಿಫಲರಾಗಿದ್ದರು.

ಆದರೆ ಪದ್ಮಜಾ ರಾವ್ ಅವರು ಸಾಲ ಹಿಂತಿರುಗಿಸಿದ ಹಿನ್ನೆಲೆ ವೀರೇಂದ್ರ ಅವರು ಆ ಚೆಕ್​ ಮೂಲಕ ಹಣ ಪಡೆಯಲು ಮುಂದಾದರು. ಆದರೆ, ಬ್ಯಾಂಕ್​ನಲ್ಲಿ ಹಣವಿಲ್ಲದಿದ್ದರಿಂದ ಚೆಕ್ ಬೌನ್ಸ್ ಆಗಿತ್ತು. ಬಳಿಕ ಪ್ರಕರಣ ಮಂಗಳೂರಿನ ಎಂಟನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೆಟ್ಟಿಲೇರಿತ್ತು. ವಾದ-ವಿವಾದವನ್ನು ಆಲಿಸಿದ ನ್ಯಾಯಾಲಯ ನಟಿ ಪದ್ಮಜಾ ರಾವ್ ಹಣ ನೀಡದೇ ವಂಚಿಸಿದ್ದಾರೆ ಎಂದು ತಿಳಿಸಿದೆ. 40.20 ಲಕ್ಷ ರೂ. ದಂಡ ಪಾವತಿಸುವಂತೆ ಪದ್ಮಜಾ ರಾವ್ ಅವರಿಗೆ ನ್ಯಾಯಾಲಯ ಆದೇಶಿಸಿದೆ. ದಂಡದ ಮೊತ್ತದಲ್ಲಿ 40.17 ಲಕ್ಷ ರೂಪಾಯಿಯನ್ನು ದೂರುದಾರ ವೀರೇಂದ್ರ ಶೆಟ್ಟಿ ಅವರಿಗೆ ಹಾಗೂ ಉಳಿದ ಮೂರು ಸಾವಿರವನ್ನು ರಾಜ್ಯದ ಬೊಕ್ಕಸಕ್ಕೆ ತುಂಬಲು ನ್ಯಾಯಾಲಯ ಸೂಚಿಸಿದೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *