ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರನ್ನು ಕೊಲ್ಲುವ ಉದ್ದೇಶದಿಂದ ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈನಲ್ಲಿರುವ ತನ್ನ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ತಾನು ನಂಬಿರುವುದಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಏಪ್ರಿಲ್ 14ರಂದು ನಟ ಸಲ್ಮಾನ್ ಖಾನ್ ಅವರ ಮನೆ ಮೇಲೆ ಇಬ್ಬರು ಕಿಡಿಗೇಡಿಗಳು ಗುಂಡು ಹಾರಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಸಲ್ಮಾನ್ ಖಾನ್ ನೀಡಿದ ಹೇಳಿಕೆ ಈಗ ಬಹಿರಂಗವಾಗಿದೆ.
ಏಪ್ರಿಲ್ 14 ರಂದು ಬೆಳಗಿನ ಜಾವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ನಿವಾಸದಲ್ಲಿ ನಿದ್ರಿಸುತ್ತಿದ್ದಾಗ ಹೊರಗಡೆ ಪಟಾಕಿ ತರಹದ ಶಬ್ದ ಕೇಳಿಬಂತು ಎಂದು ಖಾನ್ ಪೊಲೀಸರಿಗೆ ತಿಳಿಸಿದ್ದಾರೆ.
ಮೋಟಾರ್ ಬೈಕ್ ನಲ್ಲಿ ಬಂದ ಇಬ್ಬರು ಮೊದಲ ಮಹಡಿಯ ಬಾಲ್ಕನಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ತಮ್ಮ ಅಂಗರಕ್ಷಕ ತಿಳಿಸಿದರು. ಈ ಹಿಂದೆಯೂ ನನ್ನನ್ನು ಮತ್ತು ನನ್ನ ಕುಟುಂಬವನ್ನು ಹತ್ಯೆ ಮಾಡುವ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದಾರೆ. ಈ ಗುಂಡಿನ ದಾಳಿಯ ಬಗ್ಗೆ ಅವರ ಅಂಗರಕ್ಷಕ ಬಾಂದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ ಎಂಬುದು ತಿಳಿಯಿತು. ಹಾಗಾಗಿ ಆತನ ಗ್ಯಾಂಗ್ನವರೇ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ನಾನು ನಂಬಿದ್ದೇನೆ’ ಎಂದು ಸಲ್ಮಾನ್ ಖಾನ್ ಪೊಲೀಸರಿಗೆ ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಗ್ಯಾಂಗ್ ನನ್ನ ಮತ್ತು ನನ್ನ ಕುಟುಂಬದ ಸದಸ್ಯರನ್ನು ಕೊಲ್ಲುವ ಬಗ್ಗೆ ಈ ಹಿಂದೆಯೂ ಮಾತನಾಡಿದ್ದರು. ಈಗ ಕೂಡ ಅದೇ ಉದ್ದೇಶದಿಂದ ನನ್ನ ಮನೆ ಎದುರು ಆತನ ಗ್ಯಾಂಗ್ ಸದಸ್ಯರು ದಾಳಿ ಮಾಡಿದ್ದಾರೆ ಎಂಬುದು ನನ್ನ ನಂಬಿಕೆ’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ಸಲ್ಮಾನ್ ಖಾನ್ ಜೊತೆ 4 ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಹೇಳಲಾಗಿದೆ.