‘ಕಾಗದ’ ಚಿತ್ರವಿಮರ್ಶೆ: ಗ್ರಾಮಗಳ ವೈಷಮ್ಯದ ಮಧ್ಯೆ ಟೀನೇಜ್ ಪ್ರೇಮಕಥೆ; ಜಾತಿ -ಧರ್ಮಕ್ಕಿಂತ ಶ್ರೇಷ್ಠ ಮಾನವೀಯತೆ!

Spread the love

ಬಾಲನಟಿಯಾಗಿ ಜನರಿಗೆ ಪರಿಚಯ ಆಗಿರುವ ಅಂಕಿತಾ ಜಯರಾಂ ಅವರು ‘ಕಾಗದ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಹೊಸ ನಟ ಆದಿತ್ಯ ಅವರು ಈ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ರಂಜಿತ್​ ಕುಮಾರ್ ಗೌಡ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. 2005ರ ಸಂದರ್ಭದ ವಿಷಯವನ್ನು ಸಿನಿಮಾ ಕಥೆಯಾಗಿ ಹೆಣೆಯಲಾಗಿದೆ.

ಭೈರವಕೋಟೆ ಹಾಗೂ ಕೆಂಪ್ನಳ್ಳಿ ಎಂಬ ಎರಡು ಊರುಗಳ ಮಧ್ಯೆ ನಡೆಯುವ ಕಥೆ ‘ಕಾಗದ’ ಸಿನಿಮಾವಾಗಿದೆ. ನಾಯಕ ಶಿವು(ಆದಿತ್ಯ)ಗೆ, ಆಯೇಷಾ(ಅಂಕಿತಾ ಜಯರಾಂ) ಜೊತೆ ಪ್ರೇಮಾಂಕುರವಾಗುತ್ತದೆ. ಓದಿನಲ್ಲಿ ಸದಾ ಮುಂದಿರುವ ಶಿವು ಉತ್ತಮ ವಿದ್ಯಾಭ್ಯಾಸ ಪಡೆದು ಊರಿನಲ್ಲಿ ಆರಂಭವಾಗುವ ಆಸ್ಪತ್ರೆಯಲ್ಲಿ ವೈದ್ಯನಾಗಬೇಕು ಎಂಬ ಮಹಾತ್ವಾಕಾಂಕ್ಷೆ ಹೊಂದಿರುವ ಯುವಕ. ಈತನ ಕಾಲೇಜಿಗೆ ಆಕಸ್ಮಿಕವಾಗಿ ಆಯೆಷಾ (ಅಂಕಿತಾ) ಆಗಮಿಸುತ್ತಾಳೆ. ಅಪ್ಪನ ಆಸೆಯಂತೆ ಪೈಲಟ್ ಆಗುವ ಕನಸು ಹೊತ್ತವಳು. ಈ ಇಬ್ಬರ ನಡುವೆ ಹುಟ್ಟುವ ಪ್ರೀತಿ ಊರಿನವರ ಬಾಯಿಗೆ ಆಹಾರವಾಗುತ್ತದೆ. ಈ ನಡುವೆ ಆಯೆಷಾ ಮನೆಗೆ ಬೆಂಕಿ ಬಿದ್ದು, ಇಡೀ ಕುಟುಂಬ ಬೇರೆ ಊರಿಗೆ ಸ್ಥಳಾಂತರವಾಗುತ್ತಾರೆ. ಸಂವಹನಕ್ಕಾಗಿ ಈ ಪ್ರೇಮಿಗಳು ಕಾಗದವನ್ನೇ ಮಾಧ್ಯಮವನ್ನಾಗಿಸಿಕೊಳ್ಳುತ್ತಾರೆ. ಬಳಿಕ ಕಥೆ ತಿರುವು ಪಡೆದುಕೊಂಡು, ಮತ್ತಷ್ಟು ಬಿಕ್ಕಟ್ಟುಗಳನ್ನು ಎದುರಿಸುವುದೇ ಚಿತ್ರದ ಕಥೆ.

ಹದಿಹರೆಯದಲ್ಲಿ ಹುಟ್ಟುವ ಪ್ರೀತಿಗೆ ಕಾಗದ ಸೇತುವೆಯಾಗಿ ಕೆಲಸ ಮಾಡುತ್ತದೆ. ಇಬ್ಬರು ತಮ್ಮೆಲ್ಲಾ ಭಾವನೆ -ತಳಮಳಗಳನ್ನು ಹಂಚಿಕೊಳ್ಳುವ ಮುಗ್ದ ಮನಸುಗಳ ಪ್ರೇಮಕಥೆಯನ್ನು ನವಿರಾಗಿ ಹೆಣೆದಿದ್ದಾರೆ. ಇಬ್ಬರ ಪ್ರೇಮಕಥೆಗೆ ಊರಿನ ರಾಜಕೀಯ ಮತ್ತು ಕೆಲವರ ಅಹಂ ಅಡ್ಡಿಬರುತ್ತದೆ. ಜಾತಿ-ಧರ್ಮದ ಸಂಘರ್ಷಕ್ಕಿಂತ ಪ್ರೀತಿ, ಸ್ನೇಹದ ಆಲಿಂಗನ ಮುಖ್ಯ ಎಂಬ ಅಂಶದೊಂದಿಗೆ ಮೂಡಿ ಬಂದಿರುವ ಚಿತ್ರವಿದು. ಹಿಂದೂ ನಾಯಕ ಮತ್ತು ಮುಸ್ಲಿಂ ನಾಯಕಿಯ ಪ್ರೀತಿ ಯಶಸ್ಸು ಕಾಣುತ್ತದೆಯೇ ಮುಗ್ಧ ಪ್ರೀತಿಗೆ ನ್ಯಾಯ ಸಿಗಲಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.

ಕಾಗದ ಸಿನಿಮಾ ಕೇವಲ ಪ್ರೀತಿ, ಪ್ರಣಯಕ್ಕೆ ಮಾತ್ರ ಸೀಮಿತವಾಗಿಲ್ಲ, ಟಿನೇಜ್ ಲವ್ ಸ್ಟೋರಿ ಜೊತೆಗೆ ಜಾತಿ ಧರ್ಮಕ್ಕಿಂತ ಮಾನವೀಯತೆ ಮನುಷ್ಯತ್ವ ಮುಖ್ಯ ಎಂಬ ಸಂದೇಶ ನೀಡಲು ನಿರ್ದೇಶಕರು ಪ್ರಯತ್ನ ಮಾಡಿದ್ದಾರೆ. ರಂಜಿತ್ ಕುಮಾಕ್ ಗೌಡ ಕೇವಲ ನಿರ್ದೇಶನ ಮಾತ್ರವಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ, ಅಂತಹ ಅಂತರ್-ಧರ್ಮೀಯ ವಿಷಯಗಳಂತ ಸೂಕ್ಷ್ಮ ಅಂಶವನ್ನು ಸಿನಿಮಾವಾಗಿ ತರಲು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಈ ಹಿಂದೆ ಹಲವು ಅಂತರ್ಧಮೀಯ ಪ್ರೇಮಕಥೆಗಳು ಸಿನಿಮಾವಾಗಿ ಬಂದಿದ್ದರ ಕಾಗದ ಚಿತ್ರ ಸ್ವಲ್ಪ ವಿಭಿನ್ನ ಎನಿಸುತ್ತದೆ.

ಆದಿತ್ಯ ಮತ್ತು ಅಂಕಿತಾ ಜಯರಾಂ ಫ್ರೆಶ್ ಫೇಸ್ ಎನಿಸುತ್ತಾರೆ. ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಲಾವಿದರಾಗಿ ಬೆಳೆಯುವ ಲಕ್ಷಣಗಳಿವೆ, ತಮಗೆ ಸಿಕ್ಕ ಸಮಯದಲ್ಲಿ ನೇಹಾ ಪಾಟೀಲ್ ಮತ್ತು ರಾಜಾ ಬಾಲವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲರ್ಧದಲ್ಲಿ ಕಥೆ ನಿಧಾನಗತಿ ಅನಿಸಿದರೂ, ದ್ವಿತೀಯಾರ್ಧದಲ್ಲಿ ವೇಗ ಪಡೆದು ಕ್ಲೈಮ್ಯಾಕ್ಸ್‌ನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಕಾಗದ ಸಿನಿಮಾ ನೇರವಾದ ಕಥಾಹಂದರವನ್ನು ಹೊಂದಿರುವ ಚಲನಚಿತ್ರವಾಗಿದೆ, ಇದು ಪ್ರೀತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಅನ್ವೇಷಿಸುತ್ತದೆ. ಶಾಲೆ, ಕಾಲೇಜುಗಳಲ್ಲಿ ನಡೆಯುವ ಪ್ರೀತಿ ಪ್ರೇಮಗಳು ನಮ್ಮ ಸುತ್ತಮುತ್ತ ನಡೆಯುವ ನೈಜಘಟನೆಗಳಂತೆ ತೋರುತ್ತದೆ. ಹೀಗಾಗಿ ಪ್ರೇಕ್ಷಕನಿಗೆ ಸಿನಿಮಾ ಮತ್ತಷ್ಟು ಹತ್ತಿರವಾಗುತ್ತದೆ. ಒಟ್ಟಾರೆ ಕಾಗದ ಒಮ್ಮೆ ನೋಡಬಹುದಾದ ಸಿನಿಮಾ ಎಂದೆನಿಸುತ್ತದೆ.

Leave a Reply

Your email address will not be published. Required fields are marked *