ಇಂದ್ರಜಿತ್ ಲಂಕೇಶ್ ಆಕ್ಷನ್ ಕಟ್ ಹೇಳಿರುವ, ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯ ಅಯ್ಯರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗೌರಿ’ ಸಿನಿಮಾ ಇದೇ ಆಗಸ್ಟ್ 15ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಇದರ ಟ್ರೇಲರನ್ನು ನಟ ಕಿಚ್ಚ ಸುದೀಪ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಟ್ರೇಲರ್‌ನಲ್ಲಿ ಭರವಸೆ ಮೂಡಿಸಿರುವ ಈ ಚಿತ್ರದ ಬಗ್ಗೆ ಇಂದ್ರಜಿತ್ ಲಂಕೇಶ್ ಲವಲವಿಕೆ ಜತೆ ಮಾತನಾಡಿದ್ದಾರೆ.ಹಳ್ಳಿ ಹುಡುಗನ ಸಾಧನೆಯ ಕಥೆಯಂತೆ ಕಾಣಿಸುವ ‘ಗೌರಿ’ ಸಿನಿಮಾದ ಟ್ರೇಲರ್‌ನಲ್ಲಿ ಸಮರ್ಜಿತ್ ಮಂಡ್ಯ ಭಾಗದ ಶೈಲಿಯಲ್ಲಿ ಖಡಕ್ ಡೈಲಾಗ್ ಹೇಳುವುದು ಗಮನ ಸೆಳೆದಿದೆ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಬೇಕಿರುವ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎನ್ನುವುದು ಇದರಲ್ಲಿ ಕಾಣಿಸುತ್ತದೆ. ನಟಿ ಸಾನ್ಯ ಅಯ್ಯರ್ ಕೂಡ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಮೇಕಿಂಗ್ ಕ್ವಾಲಿಟಿ, ಹಾಡು, ಫೈಟ್ ಹಾಗೂ ಡೈಲಾಗ್ ಕೂಡ ಈ ಚಿತ್ರದ ಬಗ್ಗೆ ಭರವಸೆ ಮೂಡಿಸುತ್ತವೆ.