ಹೈದರಾಬಾದ್: ಕೇರಳದ ಭೂಕುಸಿತ ಪೀಡಿತ ವಯನಾಡ್ ಜಿಲ್ಲೆಯಲ್ಲಿ ಪುನರ್ವಸತಿ ಪ್ರಯತ್ನಗಳಿಗಾಗಿ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ದೇಣಿಗೆ ನೀಡಿದ್ದಾರೆ.
ಜುಲೈ 30 ರಂದು ಮುಂಜಾನೆ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 219 ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಲ್ಲು ಅರ್ಜುನ್, ಯಾವಾಗಲೂ ತನಗೆ ಹೆಚ್ಚಿನ ಪ್ರೀತಿಯನ್ನು ನೀಡುತ್ತಿರುವ ರಾಜ್ಯಕ್ಕೆ ತನ್ನ ಕೈಲಾದಷ್ಟು ಸಹಾಯ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
“ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಕೇರಳ ಯಾವಾಗಲೂ ನನಗೆ ತುಂಬಾ ಪ್ರೀತಿಯನ್ನು ನೀಡಿದ್ದು, ಪುನರ್ವಸತಿ ಕಾರ್ಯವನ್ನು ಬೆಂಬಲಿಸಲು ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ದೇಣಿಗೆ ನೀಡುವ ಮೂಲಕ ನನ್ನ ಕೈಲಾದಷ್ಟು ಮಾಡಲು ಬಯಸುತ್ತೇನೆ. ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಶನಿವಾರ, ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಲಯಾಳಂ ಚಿತ್ರರಂಗದ ಹಿರಿಯ ನಟ ಮೋಹನ್‌ಲಾಲ್ ಅವರು ತಮ್ಮ ಸೇನಾ ಸಮವಸ್ತ್ರದಲ್ಲಿ ವಯನಾಡ್‌ನ ಭೂ ಕುಸಿತ ಪ್ರದೇಶದಲ್ಲಿ ನಿನ್ನೆ ಭೇಟಿ ನೀಡಿದ್ದರು. ಅಲ್ಲದೇ, ಆ ಪ್ರದೇಶದಲ್ಲಿ ಪುನರ್ವಸತಿ ಕಾರ್ಯಗಳಿಗಾಗಿ 3 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ್ದರು.