ಸ್ಯಾಂಡಲ್ ವುಡ್’ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಸೇರ್ಪಡೆಗೊಳ್ಳುತ್ತಿವ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಈ ಸಾಲಿಗೆ ಇದೀಗ ‘ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರಕೂಡ ಸೇರ್ಪಡೆಗೊಂಡಿದೆ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವನ್ನು ಕರದಾಯಾಮ ಸ್ಟುಡಿಯೋಸ್ ಸಂಸ್ಥೆಯಡಿ ಚಿಂತನ್ ಕಂಬಣ್ಣ ನಿರ್ಮಿಸಿದರೆ, ಸುಂದರ್ ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನೋಡಿರುವ ಫ್ಯಾನ್ಸ್‌ಗೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ತನಿಖೆಯೊಂದರ ಸುತ್ತ ಸುತ್ತುವಂತಹ ಚಿತ್ರವಾಗಿದೆ, ಡ್ರಗ್ಸ್ ಮಾಫಿಯಾ ಹಿನ್ನೆಲೆಯಲ್ಲಿ ಸಾಗುವ ಕಥೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಹೋಗುತ್ತವೆ. ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕಿದೆ.ಚಿತ್ರಕ್ಕೆ ರಂಗಭೂಮಿ ಕಲಾವಿದರು ಕೈಜೋಡಿಸಿದ್ದು, ಬೇರೆ ಬೇರೆ ರಂಗತಂಡಗಳಲ್ಲಿ ಸಕ್ರಿಯರಾಗಿದ್ದ ಒಂದಿಷ್ಟು ಗೆಳೆಯರು ಒಟ್ಟಿಗೆ ಸೇರಿ ಈ ಚಿತ್ರವನ್ನು ಮಾಡಿದ್ದಾರೆ.
ರಂಗಭೂಮಿಯಲ್ಲಿ ಅನುಭವಿಗಳಾದರೂ ಚಿತ್ರರಂಗಕ್ಕೆ ಎಲ್ಲರೂ ಹೊಸಬರೇ ಆಗಿದ್ದಾರೆ. ಮಹಿನ್ ಕುಬೇರ್, ಮುತ್ತುರಾಜ್ ಟಿ, ನಟ ಗಗನ್, ಚಿಂತನ್ ಕಂಬಣ್ಣ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಮತ್ತು ಕನಕಪುರದಲ್ಲಿ ಚಿತ್ರೀಕರಣವಾಗಿದೆ. ಚಿತ್ರವು ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ, ದಿನಾಂಕ ಇನ್ನೂ ಘೋಷಣೆಯಾಗಿಲ್ಲ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರಕ್ಕೆ ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್ ಛಾಯಾಗ್ರಹಣ, ನಾನಿ ಕೃಷ್ಣ ಸಂಕಲನ ಮತ್ತು ಶಿವೋಂ ಸಂಗೀತವಿದೆ. ವಿ.ಎಫ್.ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ಹೊತ್ತಿದ್ದಾರೆ.