ಭಾರತೀಯ ಚಿತ್ರರಂಗದ ಭವಿಷ್ಯದ ಬಗ್ಗೆ ‘ನವರಸ ನಾಯಕ’ ಜಗ್ಗೇಶ್ ತೀವ್ರ ಕಳವಳ

Spread the love

ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ ವಿಶ್ಲೇಷಿಸುತ್ತಾ ಹಿರಿಯ ನಟ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ. ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜಡ್ಜ್ ಆಗಿರುವ ಜಗ್ಗೇಶ್, ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿ ದಯನೀಯವಾಗಿದೆ ಎಂದಿದ್ದಾರೆ. ಜಗ್ಗೇಶ್​ ಭಾವುಕರಾಗಿ ಮಾತನಾಡಿರುವ ವಿಡಿಯೋವನ್ನು ಜೀ ಕನ್ನಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಯಾರೂ ಕೆಟ್ಟ ಸಿನಿಮಾ ಮಾಡಬೇಕು ಎಂದುಕೊಂಡು ಬರುವುದಿಲ್ಲ. ಒಳ್ಳೆಯ ಪ್ರಚಾರ ಮಾಡುತ್ತಿದ್ದಾರೆ. ಟಿವಿ, ಪೇಪರ್​ ಗಳಲ್ಲಿ ಜಾಹೀರಾತುಗಳನ್ನು ಕೊಡುತ್ತಾರೆ. ಆದರೆ ಸಿನಿಮಾ ಬಿಡುಗಡೆ ಆದಾಗ ಜನವೇ ಇರುವುದಿಲ್ಲ. ಯಾಕೆ ಇಂಥಹಾ ಪರಿಸ್ಥಿತಿ ಕನ್ನಡ ಚಿತ್ರರಂಗಕ್ಕೆ ಬಂತು. ಕನ್ನಡ ಚಿತ್ರರಂಗವೇ ಹೀಗಾ? ಎಂದರೆ ಖಂಡಿತ ಇಲ್ಲ. ಏನಾಗುತ್ತಿದೆ ಚಿತ್ರರಂಗಕ್ಕೆ ಅರ್ಥವಾಗುತ್ತಿಲ್ಲ. ಹೀಗೆ ಆದರೆ ಹೇಗೆ ಸಿನಿಮಾ ಮಾಡಬೇಕು ಅರ್ಥವಾಗುತ್ತಿಲ್ಲ’ ಎಂದಿದ್ದಾರೆ ನಟ ಜಗ್ಗೇಶ್

ಅಕ್ಷಯ್ ಕುಮಾರ್ ಅವರ ನಟನೆಯ ಸಾಲು-ಸಾಲು ಸಿನಿಮಾಗಳು ಸೋತಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಅವರಂತೂ ಡಿಸಾಸ್ಟರ್ ಆಗಿಬಿಟ್ಟಿದ್ದಾರೆ. ಇಡೀ ಭಾರತದಲ್ಲಿ ಸಿನಿಮಾ ಎಂಬುದು ಸತ್ತು ಹೋಗುತ್ತಿದೆ. ಈಗೆಲ್ಲ ಹೇಗೆ ಆಗಿಬಿಟ್ಟಿದೆಯೆಂದರೆ ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡುತ್ತಾರೋ ಅದಷ್ಟೆ ಸಿನಿಮಾ ಎಂಬಂತೆ ಆಗಿಬಿಟ್ಟಿದೆ. ಯಾರು ಒಂದೊಳ್ಳೆ ಕತೆ ಮಾಡಿ, ಸಣ್ಣ ಸಿನಿಮಾ ಮಾಡುತ್ತಾರೋ ಅದು ಸಿನಿಮಾ ಅಲ್ಲ ಎಂಬಂತೆ ಆಗಿಬಿಟ್ಟಿದೆ ಪರಿಸ್ಥಿತಿ. ಹೀಗಾದರೆ ಉಳಿದವರು ಬದುಕುವುದು ಹೇಗೆ’ ಎಂದು ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿನಿಮಾಗಳನ್ನು ವಿಮರ್ಶೆ ಮಾಡುವವರ ಬಗ್ಗೆಯೂ ಮಾತನಾಡಿರುವ ಜಗ್ಗೇಶ್ ‘ಇನ್ನು ಕೆಲವು ನಮ್ಮ ಬಾಂಧವರೇ ಯಾವುದೇ ಸಿನಿಮಾ ಬಿಡುಗಡೆ ಆದಾಗ ಇದೊಂದು ಕೆಟ್ಟ ಸಿನಿಮಾ, ದರಿದ್ರ ಸಿನಿಮಾ, ಇದನ್ನು ನೋಡುವುದು ವೇಸ್ಟ್ ಎಂದೆಲ್ಲ ಹಾಕಿ ಇನ್ನೊಬ್ಬರ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಇರಲಿ ನಾನು ಯಾರನ್ನೂ ಟೀಕಿಸಲು ಹೋಗುವುದಿಲ್ಲ. ಏನೇ ಆಗಲಿ ನನಗೆ ಎಲ್ಲವನ್ನೂ ಕೊಟ್ಟಿರುವುದು ಸಿನಿಮಾ, ಹಾಗಾಗಿ ಅದರ ಬಗ್ಗೆ ಮಾತನಾಡುತ್ತಾ ಭಾವುಕನಾದೆ’ ಎಂದಿದ್ದಾರೆ ಜಗ್ಗೇಶ್.

ಜಗ್ಗೇಶ್ ನಟನೆಯ ‘ರಂಗನಾಯಕ’ ಸಿನಿಮಾ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾವನ್ನು ‘ಮಠ’, ‘ಎದ್ದೇಳು ಮಂಜುನಾಥ’ ಖ್ಯಾತಿಯ ಗುರುಪ್ರಸಾದ್ ನಿರ್ದೇಶಿಸಿದ್ದರು. ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳಿದ್ದವು ಆದರೆ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿಲ್ಲ. ಬಳಿಕ ನಟ ಜಗ್ಗೇಶ್, ಸಿನಿಮಾ ಬಗ್ಗೆ ಕ್ಷಮೆ ಸಹ ಕೇಳಿದ್ದರು.

Leave a Reply

Your email address will not be published. Required fields are marked *