ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾ ಜೋಡಿ ಹಸೆಮಣೆಗೆ ಏರುತ್ತಿದೆ. ಅದು ಕಾಟೇರ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ.
ತಮ್ಮ ವಿವಾಹ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಈ ಜೋಡಿ ಇಂದು ಸುದ್ದಿಗೋಷ್ಠಿ ಕರೆದಿದ್ದರು. ಆಗಸ್ಟ್ 10-11ರಂದು ಬೆಂಗಳೂರಿನ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ವಿವಾಹ ನೆರವೇರಲಿದ್ದು, ಆಗಸ್ಟ್ 10ರಂದು ಆರತಕ್ಷತೆ ಕಾರ್ಯಕ್ರಮ ಮತ್ತು 11ರಂದು ವಿವಾಹ ಕಾರ್ಯಕ್ರಮ ನೆರವೇರುತ್ತಿದೆ ಎಂದರು.
ಮದುವೆ ತಯಾರಿಗಳು ನಡೆಯುತ್ತಿದ್ದು ಎಲ್ಲರಿಗೂ ಆಹ್ವಾ ನೀಡಿದ್ದೇವೆ. ಎಲ್ಲರೂ ಆಗಮಿಸಿ ಆಶೀರ್ವದಿಸಬೇಕು ಎಂದರು.
ರಾಬರ್ಟ್ ಚಿತ್ರೀಕರಣ ವೇಳೆ ನಟ ದರ್ಶನ್ ಅವರು ಸುಮ್ಮನೆ ತಮಾಷೆಗೆ ಕಾಲೆಳೆಯುತ್ತಿದ್ದರು. ಏನು ನೀನು ಸೋನಲ್ ಗೆ ಸ್ಕ್ರೀನ್ ಲ್ಲಿ, ಮಾನಿಟರ್ ಲ್ಲಿ ವಿಶೇಷ ಗಮನ ನೀಡುತ್ತಿದ್ದೀಯಾ ಎನ್ನುತ್ತಿದ್ದರು, ನನ್ನ ತಾಯಿ ಬಂದಾಗ ಏನು ನಿಮ್ಮ ಮಗನಿಗೆ ಈ ಹುಡುಗಿ ಓಕೆನಾ ಎನ್ನುತ್ತಿದ್ದರು. ಹೀಗೆ ರಾಬರ್ಟ್ ಶೂಟಿಂಗ್ ವೇಳೆ ತಮಾಷೆಗೆ ಎಲ್ಲವೂ ನಡೆಯುತ್ತಿತ್ತು, ಸಿನಿಮಾ ಮುಗಿದ ಮೇಲೆ ಅಲ್ಲಿಗೇ ನಿಂತುಹೋಯಿತು. ಆದರೆ ಸಿನಿಮಾ ಸೆಟ್ ಲ್ಲಿ ಎಲ್ಲರೂ ತಮಾಷೆ ಮಾಡುತ್ತಿದ್ದರಿಂದ ನನ್ನಲ್ಲಿ ಮತ್ತು ಸೋನಲ್ ಲ್ಲಿ ಎಲ್ಲರೂ ನೀವಿಬ್ಬರು ಡೇಟಿಂಗ್ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದರು. ಆದರೆ ನಾನು ನನ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದೀನಿ, ನಂಗೆ ಲವ್, ಮದುವೆ ಬಗ್ಗೆ ಯೋಚನೆ ಮಾಡೋಕೆ ಟೈಂ ಇಲ್ಲ ಎನ್ನುತ್ತಿದೆ ಎಂದರು ತರುಣ್.
ಕಾಟೇರ ನಂತರ ಸ್ನೇಹ ಬೆಳೆದಿದ್ದು: 2003ರಿಂದ ನನ್ನ ಮತ್ತು ಸೋನಲ್ ಬಾಂಡಿಂಗ್ ಶುರುವಾಗಿದ್ದು ಕಾಟೇರ ಶುರುವಾಗಿದ್ದಾಗ ಎಲ್ಲರೂ ನೀವು ಒಳ್ಳೆ ಫೇರ್ ಎಂದು ಹೇಳುತ್ತಿದ್ದರು. ಸೋನಲ್ ಕಾಲ್ ಮಾಡಿ ನಮ್ಮಿಬ್ಬರ ನಡುವೆ ಡೇಟಿಂಗ್ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ವಿಷಯ ಕೂಡಾ ಹೇಳಿದ್ದರು ಎಂದಿದ್ದಾರೆ ತರುಣ್.
ಫೆಬ್ರವರಿಯಲ್ಲಿ ನಾವು ಪರಸ್ಪರ ಮಾತಾನಾಡಲು ಶುರು ಮಾಡಿದೆವು. ಇಬ್ಬರು ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆವು. ಕಾಟೇರ ರಿಲೀಸ್ ಬಳಿಕ ಸೋನಲ್ ಮನೆಗೆ ಹೋಗಿ ನಾವು ಮಾತನಾಡಿದೆವು. ಧರ್ಮದ ಬಗ್ಗೆ ಯಾವುದೇ ಕಂಪ್ಲಿಕೇಷನ್ ಬರಲಿಲ್ಲ ಎಂದಿದ್ದಾರೆ.
ಮನೆಯಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ. ಇಬ್ಬರು ಪರಸ್ಪರ ಧರ್ಮವನ್ನು ಗೌರವಿಸುತ್ತೇವೆ. ಇಬ್ಬರ ಯೋಚನೆ ಒಂದೇ ಇದೆ ಎಂದು ಸೋನಲ್ ಹೇಳಿದ್ದಾರೆ.
ದರ್ಶನ್ ಅಲ್ಲಿಂದಲೇ ನಮಗೆ ಆಶೀರ್ವಾದ ಮಾಡ್ತಾರೆ: ದರ್ಶನ್ ಸದ್ಯ ಜೈಲಿನಲ್ಲಿಯೇ ಇದ್ದಾರೆ. ಹಾಗಾಗಿ ಇವರಿಗೆ ಮದುವೆಗೆ ಬರೋಕೆ ಆಗೋದಿಲ್ಲ. ಆದರೆ, ಅತ್ತಿಗೆ ವಿಜಯಲಕ್ಷ್ಮಿ ಅವರಿಗೆ ಮನೆಗೆ ಹೋಗಿ ಲಗ್ನಪತ್ರಿಕೆ ಕೊಟ್ಟಿದ್ದೇನೆ. ಇವರು ಮದುವೆಗೆ ಬರ್ತಿನಿ ಅಂತಲೇ ಹೇಳಿದ್ದಾರೆ. ಇನ್ನು ‘ದರ್ಶನ್ ಸರ್’ ಅಲ್ಲಿಂದಲೇ ನಮಗೆ ಬ್ಲೆಸ್ ಮಾಡ್ತಾರೆ ಎಂದು ತರುಣ್ ಸುಧೀರ್ ಹೇಳಿದರು.
ಜೈಲಿನಲ್ಲಿ ಭೇಟಿಯಾದಾಗ ದರ್ಶನ್ ಏನೆಂದರು: ದರ್ಶನ್ ಸರ್ ನೋಡಲು ಹೋದಾಗ ಅವರು ಮದುವೆ ಪ್ರಿಪರೇಷನ್ ಬಗ್ಗೆ ಮಾತನಾಡಿದ್ದರು. ಅವರನ್ನು ಭೇಟಿ ಮಾಡಿದ್ದಾಗ ನಾನು ತುಂಬಾ ಎಮೋಷನಲ್ ಆಗಿದ್ದೆ. ಯಾವುದೇ ಕಾರಣಕ್ಕೂ ಡೇಟ್ ಮುಂದೆ ಹಾಕಬೇಡ ಎಂದು ಹೇಳಿದ್ದರು. ಅವರು ಡೇಟ್ ಮುಂದೂಡಬೇಡ ಎಂದು ಹೇಳದಿದ್ದರೇ ನಾನು ಡೇಟ್ ಮುಂದುಡುತ್ತಿದ್ದೆ ಎಂದಿದ್ದಾರೆ.
ಮದುವೆ ಕಾರ್ಡ್ ವಿಶೇಷತೆ: ಮದುವೆ ಆಹ್ವಾನ ಪತ್ರಿಕೆಯಲ್ಲಿ ಕಾಗದದಲ್ಲಿ ವಿವಿಧ ಹೂವಿನ ಗಿಡ ಹಾಗೂ ತರಕಾರಿ ಬೀಜಗಳಿವೆ. ಹಾಗಾಗಿ ಈ ಒಂದು ಲಗ್ನಪತ್ರಿಕೆಯನ್ನ ಆಚೆ ಬಿಸಾಕದೆ, ಕೈತೋಟದಲ್ಲೋ ಅಥವಾ ತೋಟದಲ್ಲಿ ಹಾಕಿದರೆ ಹೂವಿನ ಗಿಡಗಳು, ತರಕಾರಿ ಕೂಡ ಬೆಳೆಯಬಹುದು.
ಮದುವೆ ಕಾರ್ಡ್ ವೇಸ್ಟ್ ಆಗಬಾರದು: ದುಬಾರಿ ವೆಚ್ಚದಲ್ಲಿ ಪ್ರಿಂಟ್ ಹಾಕಿಸುವ ಮದುವೆ ಕಾರ್ಡ್‌ಗಳು ಸುಮ್ನೆ ವೇಸ್ಟ್ ಆಗುತ್ತಿವೆ. ಈ ರೀತಿ ಮಾಡಲೇಬಾರದು ಎಂದು ನನ್ನ ಮದುವೆಯ ಕಾರ್ಡ್ ನ್ನು ಪರಿಸರ ಸ್ನೇಹಿ ಮಾಡಿದ್ದೇನೆ ಎಂದರು,
ಇತ್ತೀಚೆಗೆ ಪ್ರಿವೆಡ್ಡಿಂಗ್ ಶೂಟ್ ನ್ನು ವಿಭಿನ್ನವಾಗಿ ಮಾಡಿ ಈ ಜೋಡಿ ಸುದ್ದಿಯಾಗಿತ್ತು.