ಬೆಂಗಳೂರು: ಕಾಪಿರೈಟ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್ ಶೆಟ್ಟಿ ಅವರು ಯಶವಂತಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದು, ನಟನನ್ನು ಪೊಲೀಸರು 1 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’ ಎಂಬ ಹಾಡು ಮತ್ತು ‘ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ’ ಸಾಂಗ್ ಅನುಮತಿ ಇಲ್ಲದೆ ಬಳಸಿದಕ್ಕೆ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರು ನೀಡಿದ್ದರು. ನ್ಯಾಯ ಎಲ್ಲಿದೆ ಚಿತ್ರದ ‘ನ್ಯಾಯ ಎಲ್ಲಿದೆ’ ಹಾಡು ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.
ದೂರು ಬೆನ್ನಲ್ಲೇ ಇಂದು ವಿಚಾರಣೆಗೆ ಹಾಜರಾಗಿರುವ ರಕ್ಷಿತ್ ಶೆಟ್ಟಿಯವರು ಪೊಲೀಸರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಸಿನಿಮಾ ತೆರೆಕಾಣುವುದಕ್ಕೂ ಮುನ್ನ ಎಂಆರ್”ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದೇವೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ನಾವು ಹಾಡು ಬಳಕೆ ಮಾಡುವ ಕುರಿತು ಮಾತುಕತೆ ನಡೆಸಿದ್ದೆವು. ಆದರೆ, ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಡ್ಜೆಟ್ ಅನ್ನು ಮೀರಿತ್ತು. ಎಂಆರ್’ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರುಮಾತುಕತೆಗೆ ಅವರು ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಮಾಡಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಚಿತ್ರದಲ್ಲಿ ಬಳಕೆಯಾಗಿರುವ ಹಾಡಿನ ತುಣುಕುಗಳ ತೋರಿಸಿದ ರಕ್ಷಿತ್ ಶೆಟ್ಟಿ ಅವರು, ಚಿತ್ರದಲ್ಲಿ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂಬುದರ ಕುರಿತಂತೆಯೂ ಸ್ಪಷ್ಟನೆ ನೀಡಿದ್ದಾರೆಂದು ತಿಳಿದುಬಂದಿದೆ.