ಸೆಲ್ಫಿಗೆ ಮುಂದಾದ ಅಭಿಮಾನಿಯನ್ನು ‘ತಳ್ಳಿದ’ ಮೆಗಾಸ್ಟಾರ್ ಚಿರಂಜೀವಿ! ವಿಡಿಯೋ ವೈರಲ್

Spread the love

ಹೈದರಾಬಾದ್: ತೆಲುಗಿನ ಸೂಪರ್‌ಸ್ಟಾರ್, ಪದ್ಮವಿಭೂಷಣ ಪ್ರಶಸ್ತಿ ವಿಜೇತ ಚಿರಂಜೀವಿ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿಯನ್ನು ಪಕ್ಕಕ್ಕೆ ತಳ್ಳುತ್ತಿರುವ ವಿಡಿಯೋ ವೈರಲ್ ಆದ ನಂತರ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪತ್ನಿ ಸುರೇಖಾ ಕೊನಿಡೆಲಾ ಹಾಗೂ ಸೆಕ್ಯೂರಿಟಿಯೊಂದಿಗೆ ಎಲಿವೇಟರ್ ನಲ್ಲಿ ಚಿರಂಜೀವಿ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿರುವ ದಿನಾಂಕ ಇಲ್ಲದ ವಿಡಿಯೋವನ್ನು ಅನೇಕ ಎಕ್ಸ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋದಲ್ಲಿ ದೇಶಿಯ ವಿಮಾನಯಾನ ಸಂಸ್ಥೆಯೊಂದರ ಸಮವಸ್ತ್ರ ಧರಿಸಿರುವ ಅಭಿಮಾನಿಯೊಬ್ಬ ಚಿರಂಜೀವಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ನಟ ಸೆಲ್ಫಿ ನೀಡದೆ ಹೊರ ನಡೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ವಿರಮಿಸಿದ ಸೂಪರ್‌ಸ್ಟಾರ್ ಅವರನ್ನು ನೋಡಿದ ಅಭಿಮಾನಿಗಳು,ಅವರೊಂದಿಗೆ ಫೋಟೋ ಕ್ಲಿಕ್ಕಿಸಲು ಮತ್ತೊಂದು ಪ್ರಯತ್ನ ಮಾಡಿದ್ದಾರೆ. ಆದರೆ, ಅವರನ್ನು ಪಕ್ಕಕ್ಕೆ ತಳ್ಳಿ ಹೊರನಡೆದಿದ್ದು, ಕೆಲವರು ನಟನ ನಡವಳಿಕೆ ‘ಒರಟು’ ಎಂದಿದ್ದಾರೆ. ಮತ್ತೆ ಕೆಲವರು ಅವರ ಖಾಸಗಿತನವನ್ನು ಗೌರವಿಸಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಕಳೆದ ತಿಂಗಳು, ಮತ್ತೊಬ್ಬ ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರ ಅಂಗರಕ್ಷಕರೊಬ್ಬರು ವಿಶೇಷ ಚೇತನ ಅಭಿಮಾನಿಯೊಬ್ಬರನ್ನು ಹೊಡೆದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಬಳಿಕ ನಾಗಾರ್ಜುನ ಅವರು ಎಕ್ಸ್ ಪೋಸ್ಟ್‌ನಲ್ಲಿ ಘಟನೆಗೆ ಕ್ಷಮೆಯಾಚಿಸಿದ್ದರು. ಕೆಫೆ ಉದ್ಯೋಗಿಯಾಗಿದ್ದ ಅಭಿಮಾನಿಯನ್ನು ಭೇಟಿಯಾಗಿ, ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದರು.

Leave a Reply

Your email address will not be published. Required fields are marked *