ರಂಗಾಯಣ ರಘು

Spread the love

ರಂಗಾಯಣ ರಘು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಕಲಾವಿದ.ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇವರು ಮೈಸೂರಿನ ಖ್ಯಾತ ರಂಗಸಂಸ್ಥೆ ರಂಗಾಯಣದ ಪ್ರತಿಭೆ.

ಕೊಟ್ಟೂರು ಚಿಕ್ಕರಂಗಪ್ಪ ರಘುನಾಥ್ (ರಂಗಾಯಣ ರಘು) 1965 ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೊಟ್ಟೂರಿನಲ್ಲಿ ಜನಸಿದರು. ತಂದೆ ಚಿಕ್ಕರಂಗಪ್ಪ ,ತಾಯಿ ವೀರಮ್ಮ. ಇವರು ಒಂದುವರೆ ವರ್ಷದವರಿದ್ದಾಗ ತಾಯಿ ತೀರಿಕೊಂಡರು. ನಾಲ್ಕನೇ ತರಗತಿವರೆಗೆ ಊರಲ್ಲೇ ಓದಿ ನಂತರ ಬೆಂಗಳೂರಿಗೆ ಬಂದರು.

8 ನೇ ಕ್ಲಾಸ್‌ನಿಂದಲೇ ನಾಟಕದ ಬಗ್ಗೆ ಆಸಕ್ತಿಯಿದ್ದ ರಘುರವರು 10 ನೇ ಕ್ಲಾಸ್ ಪಾಸ್ ಆಗದೇ ಮತ್ತೆ ಊರಿಗೆ ಹೋದರು. ಕೆಲಕಾಲ ಊರಿನಲ್ಲಿ ಕುರಿ ಮೇಯಿಸಿಕೊಂಡು ಇದ್ದರು. ನಂತರ ಮತ್ತೆ ಬೆಂಗಳೂರಿಗೆ ಬಂದು ನ್ಯಾಷನಲ್ ಕಾಲೇಜು ಸೇರಿದರು.

1988 ರಲ್ಲಿ ಮೈಸೂರಿನ ರಂಗಸಂಸ್ಥೆ `ರಂಗಾಯಣ’ ಸೇರಿದರು. ಇಲ್ಲಿ ಇವರಿಗೆ ಪ್ರತಿ ತಿಂಗಳು 800 ರೂಪಾಯಿ ಸಂಬಳ ದೊರೆಯುತ್ತಿತ್ತು. 1995 ರಲ್ಲಿ ಹಂಸಲೇಖ ನಿರ್ದೇಶನದ `ಸುಗ್ಗಿ’ ಚಿತ್ರದಲ್ಲೊಂದು ಪಾತ್ರ ಮಾಡಿದರು. ಆದರೆ ಈ ಚಿತ್ರ ತೆರೆಕಾಣಲಿಲ್ಲ. ನಂತರ 2002 ರಲ್ಲಿ ಎಂ.ಎಸ್.ರಮೇಶ್ ನಿರ್ದೇಶನದ ಕಿಚ್ಚ ಸುದೀಪ್ ಅಭಿನಯದ `ಧಮ್’ ಚಿತ್ರದಲ್ಲಿ ನಟಿಸಿದರು. ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ಸಣ್ಣ – ಪುಟ್ಟ ಪಾತ್ರಗಳನ್ನು ಮತ್ತು ಕೆಲವು ಚಿತ್ರಗಳಲ್ಲಿ ಖಳನಾಯಕರಾಗಿ ನಟಿಸಿದರು.ಆದರೆ ಇವರಿಗೆ ಬಿಗ್‌ ಬ್ರೇಕ್ ಕೊಟ್ಟ ಚಿತ್ರ `ದುನಿಯಾ’. ಈ ಚಿತ್ರದಲ್ಲಿ ತಮ್ಮ ಗಂಭೀರ ಪಾತ್ರಗಳಿಂದ ಹೊರಬಂದು ಸಂಪೂರ್ಣ ಹಾಸ್ಯ ಪಾತ್ರ ಮಾಡಿದರು. ಭಿನ್ನ- ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ರಘುರವರು ಹತ್ತು -ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Leave a Reply

Your email address will not be published. Required fields are marked *