ತೆರಿಗೆ ಬಾಕಿ ಪ್ರಕರಣ; ‘ಕಾಟೇರ’ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ಗೆ ಹೈಕೋರ್ಟ್‌ನಲ್ಲಿ ಬಿಗ್ ರಿಲೀಫ್

Spread the love

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಲ್‌ಲೈನ್‌ ಮಾಲ್‌ಗೆ ಬೀಗ ಬಿದ್ದಿತ್ತು. ಬಿಬಿಎಂಪಿ ಅಧಿಕಾರಿಗಳು ಸಿನಿಮಾ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ಕಟ್ಟಡವನ್ನು ಸೀಲ್ ಮಾಡಿದ್ದರು. ಇದೀಗ ಹೈಕೋರ್ಟ್‌ನಲ್ಲಿ ರಾಕ್‌ಲೈನ್‌ ವೆಂಕಟೇಶ್‌ಗೆ ರಿಲೀಫ್ ಸಿಕ್ಕಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಳೆದ ಬುಧವಾರ(ಫೆಬ್ರವರಿ 14) ನಗರದ ಜಾಲಹಳ್ಳಿ ಕ್ರಾಸ್ ಬಳಿ ಇರುವ ರಾಕ್‌ಲೈನ್ ಮಾಲ್ ಹಾಗೂ ಮೋಹನ್‌ ಚಿತ್ರಮಂದಿರಕ್ಕೆ ಬೀಗ ಹಾಕಿದ್ದರು. ಇಂದು(ಫೆಬ್ರವರಿ 19) ಆ ಸೀಲ್ ತೆರವು ಮಾಡುವಂತೆ ಹೈಕೋರ್ಟ್ ಪಾಲಿಕೆಗೆ ಸೂಚನೆ ನೀಡಿದೆ. ಪೊಲೀಸರು ಹಾಗೂ ಮಾರ್ಷಲ್‌ಗಳ ಸಮ್ಮುಖದಲ್ಲಿ ಅಂದು ಬಿಬಿಎಂಪಿ ವಲಯ ಆಯುಕ್ತರಾದ ಪ್ರೀತಿ ಗೆಹ್ಲೋಟ್ ತಂಡ ಮಾಲ್‌ಗೆ ಬೀಗ ಹಾಕಿತ್ತು.
ಇದೀಗ ತಕ್ಷಣ ಸೀಲ್ ತೆಗೆಯಬೇಕು, ವ್ಯಾಪಾರ ವಹಿವಾಟಿಗೆ ತೊಂದರೆ ಕೊಡಬಾರದು ಎಂದು ಕೋರ್ಟ್ ಆದೇಶ ನೀಡಿರುವುದಾಗಿ ವರದಿಯಾಗಿದೆ. ತೆರಿಗೆ ಹಣದ ವಿಚಾರವಾಗಿ ಮತ್ತೊಂದು ಅರ್ಜಿ ಸಲ್ಲಿಸುವಂತೆಯೂ ಸೂಚಿಸಿದೆ. ಮಾಲ್‌ಗೆ ಬೀಗ ಬಿದ್ದ ಬೆನ್ನಲ್ಲೇ ಇದನ್ನು ಪ್ರಶ್ನಿಸಿ ರಾಕ್‌ಲೈನ್ ಮಾಲ್ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತುರ್ತು ಅರ್ಜಿ ವಿಚಾರಣೆಗೆ ಮನವಿ ಮಾಡಲಾಗಿತ್ತು. ಇದೀಗ ಅರ್ಜಿಯ ವಿಚಾರಣೆ ನಡೆದು ಕೋರ್ಟ್ ಸೂಚನೆ ನೀಡಿದೆ. ಅರ್ಜಿಯ ವಿಚಾರ ಇರ್ತರ್ಥ ಆಗಿತ್ತು ಎಂದು ಹೇಳಿ ಮಾಲ್ ಮುಚ್ಚುವುದು ಸರಿಯಲ್ಲ. 12 ಕೋಟಿ ರೂ. ತೆರಿಗೆ ಬಾಕಿ ಆರೋಪದ ಬಗ್ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಅದಕ್ಕೆ ಪೂರಕವಾದ ಸಾಕ್ಷಿ, ಮಾಹಿತಿ ನೀಡಿ ಎಂದು ಕೋರ್ಟ್ ಹೇಳಿದೆ. ಸದ್ಯ ಮಾಲ್ ಬೀಗ ತೆಗೆಯುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಬಿಬಿಎಂಪಿಗೆ ಸೂಚನೆ ನೀಡಿದೆ.
10 ವರ್ಷಗಳಿಂದ ಮಾಲ್ ಆಡಳಿತ ಮಂಡಳಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ. ಒಟ್ಟು 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕು ಎನ್ನಲಾಗುತ್ತಿದೆ. ತೆರಿಗೆ ಪಾವತಿ ಮಾಡುವಂತೆ ಡಿಮಾಂಡ್ ನೋಟೀಸ್ ನೀಡಿದ್ದರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡು ಮಾಲ್‌ಗೆ ಬೀಗ ಹಾಕಿದ್ದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು.
ಮಾಲ್‌ಗೆ ಬೀಗ ಹಾಕಿದ್ದ ಸಂದರ್ಭದಲ್ಲಿ ಮಾತನಾಡಿದ್ದ ದಾಸರಹಳ್ಳಿ ಜಂಟಿ ಆಯುಕ್ತ ಬಾಲಶೇಖರ್ “ಅರ್ಧ ತೆರಿಗೆಯಾದ್ರೂ ಮಾಲ್ ಆಡಳಿತ ಮಂಡಳಿ ಕಟ್ಟಬೇಕು. ಅಲ್ಲಿಯವರೆಗೂ ಮಾಲ್ ತೆರೆಯುವಂತಿಲ್ಲ. ಈ ಹಿಂದೆ ಈ ಕೇಸ್ ಕೋರ್ಟ್‌ನಲ್ಲಿತ್ತು. ಒಂದು ವರ್ಷದ ಹಿಂದೆ ಕೇಸ್ ಇತ್ಯರ್ಥವಾಗಿದೆ. ಆದರೂ ತೆರಿಗೆ ಪಾವತಿ ಮಾಡಿಲ್ಲ. ಇದೇ ಕಾರಣಕ್ಕೆ ಇವತ್ತು ನಾವು ಮಾಲ್‌ಗೆ ಬೀಗ ಹಾಕಿದ್ದೇವೆ. ಬೀಗ ಹಾಕಲು ಅನೇಕರು ವಿರೋಧ ಮಾಡಿದ್ರು. ಆದರೂ ನಮ್ಮ ಕರ್ತವ್ಯ ನಾವು ನಿರ್ವಹಿಸಿದ್ದೇವೆ” ಎಂದು ತಿಳಿಸಿದ್ದರು.
ರಾಕ್‌ಲೈನ್ ವೆಂಕಟೇಶ್ ವಿರುದ್ಧ ಈ ಹಿಂದೆ ಬಿಜೆಪಿ ಮುಖಂಡ ಎನ್‌. ಆರ್‌ ರಮೇಶ್ ತೆರಿಗೆ ವಂಚನೆ ಆರೋಪ ಮಾಡಿದ್ದರು. ತಪ್ಪು ದಾಖಲೆಗಳನ್ನು ಸೃಷ್ಟಿಸಿ ಮಾಲ್ ತೆರಿಗೆ ಸರಿಯಾಗಿ ಪಾವತಿಸದೇ ಬಿಬಿಎಂಪಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಎನ್‌. ಆರ್‌ ರಮೇಶ್ ನೀಡಿದ ದೂರಿನ ಅನ್ವಯ ಬಿಬಿಎಂಪಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ತೆರಿಗೆ ಬಾಕಿ ಸಂಬಂಧ ನೋಟಿಸ್ ನೀಡಲಾಗಿತ್ತು.

Leave a Reply

Your email address will not be published. Required fields are marked *