ಸಾಮಾನ್ಯವಾಗಿ ಒಂದು ಚಿತ್ರ ಬಿಡುಗಡೆಯಾಗಿ, ಆ ನಂತರ ಅದರ ಮುಂದುವರೆದ ಭಾಗ ಬರುವುದು ವಾಡಿಕೆ. ಆದರೆ, ಇಲ್ಲೊಂದು ಚಿತ್ರದ ಮುಂದುವರೆದ ಭಾಗ ಮೊದಲು ಬರುತ್ತಿದೆ. ಆ ನಂತರ ನಿಜವಾದ ಕಥೆ ತೆರೆಯ ಮೇಲೆ ತೆರೆದುಕೊಳ್ಳುತ್ತಿದೆ.
ಈ ಚಿತ್ರದ ಹೆಸರು ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’. ಇದು ಚಿತ್ರದ ಎರಡನೇ ಭಾಗ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಚಿತ್ರತಂಡ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಕನ್ನಡ ಮತ್ತು ಮರಾಠಿಯಲ್ಲಿ ತಯಾರಾಗುತ್ತಿರುವ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಸಡಗರ ರಾಘವೇಂದ್ರ, ನಕ್ಸಲಿಸಂ ಹಿನ್ನೆಲೆಯಾಗಿಟ್ಟುಕೊಂಡು ಮಾಡಿರುವ ಕಥೆ ಇದು. ಹಾಗಂತ ಇಲ್ಲಿ ನಕ್ಸಲಿಸಂನ್ನು ವೈಭವಿಕರಿಸಿಲ್ಲ. ಹಾಗೆಯೇ ಯಾವೊಬ್ಬ ವ್ಯಕ್ತಿಯ ಕುರಿತಾದ ಚಿತ್ರವೂ ಇದಲ್ಲ. ಭಾವನೆಗಳು ಸಿದ್ಧಾಂತಗಳನ್ನು ಮೀರಿಸಿದಾಗ ಏನೆಲ್ಲ ಆಗುತ್ತದೆ ಎನ್ನುವುದೇ ಚಿತ್ರದ ಕಥೆಯಾಗಿದೆ. ಇದು ಎರಡನೆಯ ಭಾಗ. ಮೊದಲ ಭಾಗ ಆ ನಂತರ ಬರುತ್ತದೆ. ಮುಂದುವರೆದ ಭಾಗದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಇದು ಮುಗಿದ ನಂತರ ಆ ಚಿತ್ರವನ್ನೂ ಕೈಗೆತ್ತಿಕೊಳ್ಳುತ್ತೇವೆ. ಉಡುಪಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ ಎಂದು ಹೇಳಿದರು.ಸಡಗರ ರಾಘವೇಂದ್ರ ಅವರು ‘ಮುಂಗಾರು ಮಳೆ 2’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದಾಗ ನಾಯಕ ಕವೀಶ್ ಶೆಟ್ಟಿ ಕೂಡ ಆ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದರಂತೆ. ಅವರ ಕಾರ್ಯವೈಖರಿ ನೋಡಿ, ಆಗಲೇ ಅವರ ಜೊತೆಗೆ ಒಂದು ಚಿತ್ರ ಮಾಡಬೇಕು ಅಂತಂದುಕೊಂಡಿದ್ದರಂತೆ. ಅದು ಈ ಚಿತ್ರದ ಮೂಲಕ ಕೈಗೂಡಿದೆ.
ಸಡಗರ ರಾಘವೇಂದ್ರ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ಮೊದಲ ನಿರ್ದೇಶನದಲ್ಲಿ ಚಿತ್ರ ಮಾಡುವ ಆಸೆಯಿತ್ತು. ಈ ಚಿತ್ರದ ಮೂಲಕ ಅದು ಈಡೇರಿದೆ. ಚಿತ್ರೀಕರಣ ಬಹಳ ರಿಸ್ಕಿಯಾಗಿತ್ತು. ಶೂಟಿಂಗ್ ಸಮಯದಲ್ಲಿ ನನ್ನ ಕಾಲಿಗೆ ಪೆಟ್ಟಾಗಿ, ಚಿತ್ರ ಸಾಕಷ್ಟು ವಿಳಂಬವಾಯಿತು ಎಂದು ಕವೀಶ್ ಶೆಟ್ಟಿ ಹೇಳಿದರು.
ಈ ಚಿತ್ರಕ್ಕಾಗಿ ಮರಾಠಿ ಕಲಿತು ನಟಿಸಿರುವುದಾಗಿ ಹೇಳಿದ ಮೇಘಾ ಶೆಟ್ಟಿ, ‘ಎರಡೂ ಭಾಷೆಯ ಚಿತ್ರಗಳಲ್ಲಿ ಅದೇ ನಟ-ನಟಿಯರಿದ್ದರು. ಮರಾಠಿ ನಟರು ಕನ್ನಡ ಕಲಿತರೆ, ನಾವು ಮರಾಠಿ ಕಲಿತು ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದ್ದು, ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿರುವ ಖುಷಿಯಿದೆ’ ಎಂದರು. ಇದೇ ವೇಳೆ ನಿರ್ದೇಶಕರು ಹಾಗೂ ಚಿತ್ರತಂಡವನ್ನು ಶ್ಲಾಘಿಸಿದರು.
ಅಂದಹಾಗೆ, ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಚಿತ್ರವನ್ನು ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂ ಲಾಂಛನದಡಿಯಲ್ಲಿ ವಿಜಯ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ಹವರಾಲ್ ಹಾಗೂ ದೀಪಕ್ ರಾಣೆ ನಿರ್ಮಾಣ ಮಾಡುತ್ತಿದ್ದಾರೆ. ಸಡಗರ ರಾಘವೇಂದ್ರ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ, ಬಿ. ಸುರೇಶ, ಶಿವಾನಿ ಸುರ್ವೆ, ಅರ್ಜುನ್ ಕಾಪಿಕ್ಕಾಡ್, ವಿರಾಟ್ ಮಡಕೆ ಮುಂತಾದವರು ನಟಿಸಿದ್ದಾರೆ. ’ ಚಿತ್ರಕ್ಕೆ ಆರ್.ಡಿ. ನಾಗಾರ್ಜುನ್ ಅವರ ಛಾಯಾಗ್ರಹಣ ಮತ್ತು ಪ್ರಾಂಶು ಝಾ ಅವರ ಸಂಗೀತವಿದೆ.