ಸ್ಯಾಂಡಲ್‌ವುಡ್ ಗುಳಿಕೆನ್ನೆ ಬೆಡಗಿ ರಚಿತಾ ರಾಮ್ಮ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೊದಲು ‘ಬನಾರಸ್’ ಚಿತ್ರದ ಮೂಲಕ ಸುದ್ದಿಯಾಗಿದ್ದ ನಟ ಝೈದ್ ಖಾನ್, ಇದೀಗ ಅನಿಲ್ ಕುಮಾರ್ ನಿರ್ದೇಶನದ ‘ಕಲ್ಟ್’ ಚಿತ್ರದಲ್ಲಿ ನಾಯಕರಾಗಿದ್ದಾರೆ. ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇತ್ತೀಚೆಗಷ್ಟೇ ನಟಿ ರಚಿತಾ ರಾಮ್ ಅವರು ರಜನಿಕಾಂತ್ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು.
‘ಬನಾರಸ್’ ಬಿಡುಗಡೆಯಾಗಿ ಒಂದೂವರೆ ವರ್ಷಗಳಾದರೂ ಆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದೊಳ್ಳೆಯ ಕಥೆ ಮತ್ತು ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದ ಝೈದ್, ಈ ವರ್ಷದ ಆರಂಭದಲ್ಲಿ ‘ಕಲ್ಟ್’ ಎಂಬ ಚಿತ್ರ ಒಪ್ಪಿದ್ದರು.ಇನ್ನು, ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ಹೊರತುಪಡಿಸಿದರೆ ರಚಿತಾ ರಾಮ್ ಕನ್ನಡದಲ್ಲಿ ಯಾವೊಂದು ಚಿತ್ರವನ್ನೂ ಒಪ್ಪಿರಲಿಲ್ಲ.ಝೈದ್ ಖಾನ್ ಅಭಿನಯದ ‘ಕಲ್ಟ್’ ಚಿತ್ರಕ್ಕೆ ರಚಿತಾ ಇದೀಗ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನು ಉಪಾಧ್ಯಕ್ಷ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದು, ಈ ಚಿತ್ರದಲ್ಲಿ ಝೈದ್ ಖಾನ್ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ಬ್ಲಡಿ ಲವ್’ ಎಂಬ ಟ್ಯಾಗ್‍ಲೈನ್ ಇದ್ದು, ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಶುರುವಾಗಿದೆ.