ಬೆಂಗಳೂರು: ಸಿನಿಮಾ ನಟರು ಎಂದ ಮೇಲೆ ಅವರಿಗೆ ಅಭಿಮಾನಿ ಬಳಗ ಇರುತ್ತದೆ. ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಹತ್ತಾರು ಒಳ್ಳೆಯ ಕೆಲಸ ಮಾಡುವುದು, ನಟನ ಹೆಸರಿಗೆ ಕಳಂಕ ಬರದಂತೆ ನಡೆದುಕೊಳ್ಳುವುದು ಮುಖ್ಯವಾಗುತ್ತದೆ.
ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನಟರ ಅಭಿಮಾನಿಗಳು ಪರಸ್ಪರ ನಿಂದಿಸುವುದು, ಕಿತ್ತಾಡಿಕೊಳ್ಳುವುದು, ಕಾಲೆಳೆಯುವುದು, ಕೆಟ್ಟ ಹೆಸರು ಬರುವಂತೆ ನಡೆದುಕೊಳ್ಳುವುದು, ನಟರ ಮಧ್ಯೆ ಜಗಳ ತಂದಿಡುವ ವಿಕೃತ್ತ ಪ್ರವೃತ್ತಿ ಹೆಚ್ಚಾಗುತ್ತಿದೆ.
ಇಂದು ಖ್ಯಾತ ನಟ ‘ಕಿಚ್ಚ’ ಸುದೀಪ್ ಅವರಿಗೆ 51ನೇ ಹುಟ್ಟುಹಬ್ಬ. ಈ ಬಾರಿ ಹುಟ್ಟುಹಬ್ಬವನ್ನು ಜೆಪಿ ನಗರದ ತಮ್ಮ ನಿವಾಸದ ಬಳಿ ಸುದೀಪ್ ಆಚರಿಸಿಕೊಂಡಿಲ್ಲ, ಮನೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಾರೆ ಎಂಬ ಕಾರಣಕ್ಕೆ ಜಯನಗರದ ಎಂಇಎಸ್ ಮೈದಾನದಲ್ಲಿ ನಡೆಸಿದರು.
ಈ ವೇಳೆ ಅಭಿಮಾನಿಗಳ ಬಗ್ಗೆ ಮಾತನಾಡಿರುವ ಕಿಚ್ಚ, ನಾನಿಂದು ತಲೆ ಎತ್ತಿ ಓಡಾಡುತ್ತಿದ್ದೇನೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಸೆಪ್ಟೆಂಬರ್ 2ರಂದು ಎಲ್ಲರೂ ಬರುತ್ತಾರೆ. ಆದರೆ ಸೆ.1ರ ರಾತ್ರಿ 12 ಗಂಟೆಗೆ ಬರುವ ಕೂಗನ್ನು ಕೇಳಿದಾಗ, ನಮ್ಮನ್ನು ಇನ್ನಷ್ಟು ತಗ್ಗಿ-ಬಗ್ಗಿ ಇರುವಂತೆ ಮಾಡುತ್ತದೆ.
ನಾವು ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಳ್ಳುವುದೇ ನಿಮಗಾಗಿ. ಲೈಫ್‌ನಲ್ಲಿ ಯಾರೂ ಕಾಂಪ್ರಮೈಸ್ ಆಗಬೇಡಿ. ಪ್ರೀತಿ ಹಾಗು ಒಳ್ಳೆತನ ತೋರಿಸುವುದಕ್ಕೂ ಕಾಂಪ್ರಮೈಸ್ ಆಗಬೇಡಿ. ನನ್ನ ಫ್ಯಾನ್ಸ್ ನನಗೆ ಕಳಂಕ ತರುವ ಕೆಲಸ ಮಾಡೋದಿಲ್ಲ, ಹಾಗೇ ನಾನು ಕೂಡ ಅಭಿಮಾನಿಗಳಿಗೆ ಕಳಂಕ ತರುವ ಕೆಲಸ ಮಾಡಲ್ಲ, ಅಭಿಮಾನಿಗಳು ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ಎಂದರು.ನನ್ನ ಅಭಿಮಾನಿಗಳು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಇದೇನೋ ಸರಿ, ಆದರೆ, ಅಭಿಮಾನಿಗಳು ನನ್ನಿಂದಲೇ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಅಂದ್ರೆ ತಪ್ಪಾಗುತ್ತದೆ. ಕಾರಣ, ಅಭಿಮಾನಿಗಳು ನಮ್ಮ ಪ್ರತಿಬಿಂಬವೇ ಆಗಿದ್ದಾರೆ. ನಾವು ತಲೆ ಎತ್ತಿಕೊಂಡು ಓಡಾಡ್ತಿದ್ದೇವೆ ಅಂದ್ರೆ, ಅದು ಇವರಿಂದಲೇ ಅಂತಲೇ ಹೇಳಬಹುದು.ಸುದೀಪ್ ಹೇಳಿದ್ದಾರೆ ಅಂತ ಅವರಾರು ಒಳ್ಳೆ ಕೆಲಸ ಮಾಡುತ್ತಿಲ್ಲ. ಅವರು ಒಳ್ಳೆಯವರೇ ಆಗಿದ್ದಾರೆ. ಹಾಗಾಗಿಯೇ ಒಳ್ಳೆ ಕೆಲಸಗಳನ್ನ ಮಾಡುತ್ತಿದ್ದಾರೆ. ಆ ಶ್ರೇಯೆಸ್ಸು ಅಭಿಮಾನಿಗಳ ಪೋಷಕರಿಗೆ, ಅಭಿಮಾನಿಗಳ ಸ್ನೇಹಿತರಿಗೆ, ಅವರ ಸಂಬಂಧಿಕರಿಗೆ ಸಲ್ಲುತ್ತದೆ. ಹಾಗಂತ ಇವರೆಲ್ಲ ನನ್ನಿಂದಲೇ ಕೆಲಸ ಮಾಡಿದ್ದಾರೆ ಅಂತ ಹೇಳೋದೇ ತಪ್ಪು ಎಂದರು.