ಕ್ಷಮಿಸಿ, ನ್ಯಾಯಮೂರ್ತಿ ಹೇಮಾ ವರದಿ ಬಗ್ಗೆ ನನಗೇನೂ ಗೊತ್ತಿಲ್ಲ: ರಜನಿಕಾಂತ್

Spread the love

ಚೆನ್ನೈ: ಮಲಯಾಳಂ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿ ಮೂಡಿಸಿರುವ ನ್ಯಾಯಮೂರ್ತಿ ಹೇಮಾ ವರದಿ ಇದೀಗ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತಂತೆ ಬಹಿರಂಗವಾಗಿ ಒಬ್ಬೊಬ್ಬರೇ ನಟಿಯರು ಮಾತಾಡುತ್ತಿದ್ದಾರೆ. ಜೊತೆಗೆ ದೂರುಗಳು ದಾಖಲಾಗುತ್ತಿವೆ.

ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ನನಗೆ ಗೊತ್ತಿಲ್ಲ. ತಮಿಳುನಾಡಿನಲ್ಲಿ ಅಂತಹ ಸಮಿತಿಯನ್ನು ರಚಿಸಬೇಕೆಂಬ ಬೇಡಿಕೆಯ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ನಟ ರಜನಿಕಾಂತ್‌ ಹೇಳಿದ್ದಾರೆ. ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿಯಂತೆಯೇ ತಮಿಳುನಾಡಿನಲ್ಲೂ ಸಮಿತಿಯೊಂದನ್ನು ರಚಿಸಬೇಕೆಂದು ಅನೇಕರು ಒತ್ತಾಯಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಏನು? ನನಗೆ ಅದರ ಬಗ್ಗೆ ತಿಳಿದಿಲ್ಲ, ಕ್ಷಮಿಸಿ’ ಎಂದಷ್ಟೇ ತಿಳಿಸಿದ್ದಾರೆ.

ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ತಾರತಮ್ಯ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಡುಗಡೆಯಾಗಿತ್ತು. ವರದಿ ಬಹಿರಂಗಗೊಂಡ ಬೆನ್ನಲ್ಲೇ ಕಲಾವಿದರ ಸಂಘಕ್ಕೆ ಅಧ್ಯಕ್ಷ ನಟ ಮೋಹನ್‌ಲಾಲ್, ಇತರ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ಹೇಮಾ ಸಮಿತಿ ವರದಿ ಸಲ್ಲಿಕೆಯಾದ ಬಳಿಕ ಸಿಪಿಎಂ ಶಾಸಕ ಎಂ.ಮುಕೇಶ್, ನಟ ಸಿದ್ದೀಕ್‌, ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಅರೋಪಗಳು ಕೇಳಿಬಂದಿದ್ದು, ನಾಲ್ಕು ಎಫ್‌ಐಆರ್‌ ದಾಖಲಾಗಿವೆ.

Leave a Reply

Your email address will not be published. Required fields are marked *