‘ಕಿಚ್ಚ, ಅಭಿನಯ ಚಕ್ರವರ್ತಿ’ ಎಂದೇ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ನಟ. ಸುದೀಪ್ 1973ರ ಸೆಪ್ಟೆಂಬರ್ 2ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಸಂಜೀವ್ ಮಂಜಪ್ಪ ಹಾಗೂ ತಾಯಿ ಸರೋಜಾ. ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಂಡರ್ 17 ಹಾಗೂ ಅಂಡರ್ 19 ಕ್ರಿಕೆಟ್‌ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ ಸುದೀಪ್ ಅವರಿಗೆ ನಟನೆ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ, ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ಸೇರಿಕೊಂಡು ತರಬೇತಿ ಪಡೆದರು. ನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದರು.
ಸಿನಿಜೀವನ
ನಟ ಸುದೀಪ್ 1997ರಲ್ಲಿ ತೆರೆಕಂಡ ‘ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ 1999ರಲ್ಲಿ ಪ್ರತ್ಯಾರ್ಥ ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದರು. ತದನಂತರ ಸುನೀಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸ್ಪರ್ಶ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದರು. 2001ರಲ್ಲಿ ತೆರೆಕಂಡ ಹುಚ್ಚ ಸಿನಿಮಾ ಸುದೀಪ್‌ಗೆ ಬಿಗ್ ಬ್ರೇಕ್ ನೀಡಿತು. ಈ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಕಿಚ್ಚ. ಈ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಅವರನ್ನು ಅಭಿಮಾಗಳು ಕಿಚ್ಚ ಎಂದು ಕರೆಯಲಾರಂಭಿಸಿದರು. ಇದೀಗ ಸುದೀಪ್ ‘ಕಿಚ್ಚ ಸುದೀಪ್’ ಎಂದೇ ಪ್ರಸಿದ್ಧರಾಗಿದ್ದಾರೆ.
ಸುದೀಪ್ ನಿರ್ದೇಶನದ ಸಿನಿಮಾಗಳು
ನಟ ಸುದೀಪ್ ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿ ಕೂಡ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅವರು 2006ರಲ್ಲಿ ತೆರೆಕಂಡ `ಮೈ ಅಟೋಗ್ರಾಫ್’ ಚಿತ್ರದಿಂದ ನಿರ್ದೇಶನಕ್ಕಿಳಿದರು. ತಮ್ಮ ಸಿನಜೀವನದ 20ನೇ ಚಿತ್ರ ನಿರ್ದೇಶನ ಮಾಡಿದ ಸುದೀಪ್ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆದರು. ನಂತರ ನಂ ೭೩ ಶಾಂತಿನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಇವುಗಳಲ್ಲಿ ನಾಲ್ಕು ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಅಭೂತಪೂರ್ವ ಯಶಸ್ಸು ಪಡೆದರೆ, ಎರಡು ಚಿತ್ರಗಳು ಅತ್ಯುತ್ತಮ ವಿಮರ್ಶೆ ಪಡೆದುಕೊಂಡಿವೆ.
ಪರಭಾಷಾ ಚಿತ್ರಗಳು
ಅಭಿನಯ ಚಕ್ರರ್ತಿ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ, ಪರಭಾಷಾ ಚಿತ್ರಗಳಲ್ಲಿಯೂ ಮಿಂಚಿದ್ದಾರೆ. ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಫೂಂಕ್’, ತೆಲುಗಿನ ‘ಈಗ’, ‘ಬಾಹುಬಲಿ’ ಹಾಗೂ ತಮಿಳಿನ ‘ಪುಲಿ’ ಚಿತ್ರಗಳಲ್ಲಿ ಸುದೀಪ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕಿರುತೆರೆ
ಉದಯ ವಾಹಿಯ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದ ಸುದೀಪ್, ಸ್ಟಾರ್ ನಟರಾದ ಬಳಿಕ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡರು ಮೊದಲಿಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಪು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಕಲರ್ಸ್ ಕನ್ನಡದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ಸಕ್ರಿಯರಾದರು. ಸದ್ಯ ಬಿಗ್‌ಬಾಸ್ ಕಾರ್ಯಕ್ರಮ ೯ ಸೀಸನ್‌ಗಳನ್ನು ಮುಗಿಸಿದೆ. ಜೊತೆಗೆ ಕ್ರಿಕೆಟ್ (CCL)ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಿರ್ಮಾಣ ಸಂಸ್ಥೆ
2006ರಲ್ಲಿ ತೆರೆಕಂಡ ಮೈ ಆಟೋಗ್ರಾಪ್ ಚಿತ್ರದ ಮೂಲಕ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಆರಂಭವಾಯಿತು. ನಂತರ ಈ ಬ್ಯಾನರ್ ಅಡಿಯಲ್ಲಿ 73 ಶಾಂತಿ ನಿವಾಸ, ಮಾಣಿಕ್ಯ, ಜಿಗರಥಂಡ, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಗಳ ಜೊತೆಗೆ ವಾರಸ್ದಾರ ಎಂಬ ಸೀರಿಯಲ್ ಅನ್ನು ನಿರ್ಮಿಸಿದ್ದಾರೆ.
ವೈಯಕ್ತಿಕ ಜೀವನ
ಸುದೀಪ್ 2001ರಲ್ಲಿ ಕೇರಳ ಮೂಲದ ಪ್ರಿಯಾ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರಿಯಾ ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ್ದು, ಆರಂಭದಲ್ಲಿ ಏರ್‌ಲೈನ್ ಹಾಗೂ ಬ್ಯಾಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು 2000ರಲ್ಲಿ ಭೇಟಿಯಾಗಿದ್ದರು. ಭೇಟಿಯಾದ ಒಂದು ವರ್ಷದೊಳಗೆ ಈ ಜೋಡಿಯ ನಡುವೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿ 2001ರಲ್ಲಿ ಮದುವೆಯಾದರು. ಕ್ಲಾಸಿಕಲ್ ಡ್ಯಾನ್ಸ್, ಸಂಗೀತ ಕಲಿತಿರುವ ಪ್ರಿಯಾ ಅದ್ಭುತವಾಗಿ ಹಾಡುತ್ತಾರೆ. ಜೊತೆಗೆ 2012ರಲ್ಲಿ ಬೆಂಗಳೂರಿನಲ್ಲಿ 360 ಸ್ಟೇಜ್ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದ್ದಾರೆ. ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಅಳಿಯ ಸಂಚಿತ್ ಸಂಜೀವ್ ಅವರ ಜಿಮ್ಮಿ ಚಿತ್ರ ನಿರ್ಮಿಸಿದ್ದಾರೆ. ಈ ಜೋಡಿಗೆ ಸಾನ್ವಿ ಎಂಬ ಓರ್ವ ಪುತ್ರಿಯಿದ್ದಾರೆ.