ಎಫ್‌ಎಂ ರೇಡಿಯೋ ಮೇಲೆ ಕೇಸ್ ಹಾಕ್ತೀನಿ ಅಂತ ಗುಡುಗಿದ್ದೇಕೆ ನಾಗೇಂದ್ರ ಪ್ರಸಾದ್? ಏನಿದು ಗಲಾಟೆ?

Spread the love

ಕ್ರೆಡಿಟ್‌ಗಾಗಿ ಹೋರಾಡುವಂತಹ ಪರಿಸ್ಥಿತಿ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಅದರಲ್ಲೂ ಕ್ರಿಯೇಟಿವ್ ಫೀಲ್ಡ್‌ನಲ್ಲಿ ಇಂತಹ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತೆ. ಸಿನಿಮಾರಂಗದಲ್ಲಂತೂ ಯಾರೋ ಮಾಡಿದ ಕೆಲಸಕ್ಕೆ ಇನ್ಯಾರೋ ಕ್ರೆಡಿಟ್ ತೆಗೆದುಕೊಳ್ಳುವುದು ಕಾಮನ್. ಇನ್ನು ಕೆಲವರು ಸಂದರ್ಭಗಳಲ್ಲಿ ತಮ್ಮ ಹೆಸರನ್ನೇ ಹೇಳುವುದಿಲ್ಲ ಅನ್ನೋ ಆರೋಪಗಳು ಕೂಡ ಕೇಳಿಬರುತ್ತವೆ.
ಈಗ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ವೇದಿಕೆ ಮೇಲೆ ಕನ್ನಡದ ಹಿರಿಯ ಸಿನಿ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಕೂಡ ಅದೇ ಆರೋಪ ಮಾಡಿದ್ದಾರೆ. ಎಫ್‌ ಎಂ ಚಾನೆಲ್‌ಗಳು ಹಾಡುಗಳನ್ನು ಪ್ರಸಾರ ಮಾಡುವಾಗ ಅಲ್ಲಿ ಸಂಗೀತ ನಿರ್ದೇಶಕ ಹಾಗೂ ಸಿನಿ ಸಾಹಿತಿಯ ಹೆಸರನ್ನು ಹೇಳುವುದೇ ಇಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರೆ. ಇದೇ ಹೀಗೆ ಮುಂದುವರೆದರೆ ಕೇಸ್ ಹಾಕುವುದಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಯಾವುದೇ ವೇದಿಕೆಯಲ್ಲಿ ಹಾಡುಗಳ ಪ್ರಸಾರ ಆದರೂ, ಅಲ್ಲಿಗೆ ಸಂಗೀತ ನಿರ್ದೇಶಕರು ಹಾಗೂ ಸಿನಿ ಸಾಹಿತಿ ಹೆಸರನ್ನು ಹೇಳಬೇಕು ಅನ್ನುವುದು ಡಾ.ನಾಗೇಂದ್ರ ಪ್ರಸಾದ್ ಅವರ ವಾದ. ಆ ಹಾಡಿನಲ್ಲಿ ನಟಿಸಿರುವ ಹೀರೋ- ಹೀರೋಯಿನ್ ಜನರಿಗೆ ಗೊತ್ತಿರುತ್ತೆ. ಹಾಗೇ ಗಾಯಕ ಹೆಸರು ಕೂಡ ಗೊತ್ತಿರುತ್ತೆ. ಆದರೆ, ತೆರೆಯ ಹಿಂದೆ ಕೆಲಸ ಮಾಡಿರುವ ಸಂಗೀತ ನಿರ್ದೇಶಕರು ಹಾಗೂ ಸಿನಿ ಸಾಹಿತಿಗಳ ಹೆಸರು ಹೇಳಲೇ ಬೇಕು ಅಂತ ವಾದ ಮಂಡಿಸಿದ್ದಾರೆ.
“ಆಗಲೇ ವೇದಿಕೆ ಮೇಲೆ ಅನಿಸುತಿದೆ ಯಾಕೋ ಇಂದು ಹಾಡು ಹಾಡಿದರು. ಯಾವುದೇ ಹಾಡನ್ನು ಎಲ್ಲೇ, ಯಾರೇ ಹಾಡಿದರೂ ಕೂಡ ಮನೋಮೂರ್ತಿ ಕಂಪೋಸರ್, ಜಯಂತ್ ಕಾಯ್ಕಿಣಿ ಅವರು ಬರೆದಿದ್ದು ಅನ್ನೋದನ್ನು ಹೇಳಿ. ಯಾಕಂದ್ರೆ, ನಿನ್ನೆ ಒಬ್ಬರು ಫೋನ್ ಮಾಡಿದ್ರು. ಕ್ಯಾಬ್‌ನಲ್ಲಿ ಹೋಗುತ್ತಾ ಎಫ್‌ಎಂಗಳಲ್ಲಿ ದ್ವಾಪರ ಹಾಡೇ ಪ್ರಸಾರ ಆಗುತ್ತಿತ್ತು. ಎಲ್ಲಾ ಎಫ್‌ಎಂನಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಅಂತ ಹೇಳಿದರು. ಅರ್ಜುನ್ ಜನ್ಯ ಸಂಗೀತ ಅಂತ ಹೇಳಿಲ್ಲ. ನಾಗೇಂದ್ರ ಪ್ರಸಾದ್ ಸಾಹಿತ್ಯ ಅಂತ ಹೇಳಲಿಲ್ಲ” ಎಂದು ಹೇಳಿದ್ದಾರೆ.
ಕ್ರೆಡಿಟ್‌ ಬಗ್ಗೆ ಬೇಡಿಕೆ ಇಡುತ್ತಿರುವುದು ಯಾಕೆ ಅನ್ನುವುದನ್ನು ಡಾ.ನಾಗೇಂದ್ರ ಪ್ರಸಾದ್ ‘ಕೃಷ್ಣಂ ಪ್ರಣಯ ಸಖಿ’ ವೇದಿಕೆಯಲ್ಲಿ ಹೇಳಿದ್ದಾರೆ. “ನಾನು ಈ ವೇದಿಕೆಯನ್ನು ಯಾಕೆ ಉಪಯೋಗಿಸಿಕೊಳ್ಳುತ್ತಿದ್ದೇನೆ ಅಂದರೆ, ಮೂರು ಸಾವಿರ ಹಾಡುಗಳನ್ನು ನಾನು ಬರೆದು ಇಲ್ಲಿ ನಿಂತಿದ್ದೀನಿ. ಈ ಎರಡು ದಶಕಗಳಲ್ಲಿ ನಾನು ಬರೆದಿರೋದು, ನೀವು ಕೇಳಿರೋದು ಮೂರು ಸಾವಿರ ಹಾಡುಗಳು. ಯಾವುದೇ ಮಾಧ್ಯಮಗಳಿಗೆ ಮನವಿ ಅಲ್ಲ ಆಗ್ರಹ ಮಾಡುತ್ತಿದ್ದೇನೆ. ಎಲ್ಲಾ ಎಫ್‌ಎಂ ಗಳಿಗೆ, ಎಲ್ಲಾ ಮಾಧ್ಯಮಗಳಿಗೆ ಹೇಳ್ತಾ ಇದ್ದೀನಿ, ಯಾವುದೇ ಹಾಡನ್ನು ಎಲ್ಲೇ ಪ್ರಸಾರ ಮಾಡಿದರೂ ಬರೆದವರ ಮತ್ತು ಕಂಪೋಸ್ ಮಾಡಿದವರ ಹೆಸರನ್ನು ಹೇಳಲೇ ಬೇಕು. ಹೇಳದೇ ಇದ್ದರೆ ಕೇಸ್ ಹಾಕುತ್ತೇವೆ.” ಎಂದು ಹೇಳಿದ್ದಾರೆ. ಹಾಡು ಬರೆದವರ ಹೆಸರು, ಸಂಗೀತ ನೀಡಿದವರ ಹೆಸರು ಹೇಳದೆ ಇದ್ದರೂ ಕೇಸ್ ಹಾಕಬಹುದಾ? ಇದಕ್ಕೆ ವೇದಿಕೆ ಮೇಲೆ ಡಾ.ನಾಗೇಂದ್ರ ಪ್ರಸಾದ್ ಕ್ಲಾರಿಟಿ ಕೊಟ್ಟಿದ್ದಾರೆ. “ಕೇಸ್ ಹಾಕುವ ಹಕ್ಕನ್ನು ಸರ್ಕಾರ ಕೊಟ್ಟಿದೆ. ಅದು ಕಾನೂನಿನಲ್ಲಿ ಇದೆ. ಯಾಕಿಷ್ಟು ಸೀರಿಯಸ್ ಆಗಿ ಹೇಳುತ್ತಿದ್ದೇನೆ ಅಂದರೆ, ಅನಿಸುತಿದೆ ಹಾಡು ಗಣೇಶ್ ಹಾಗೂ ಸೋನು ನಿಗಂ ಕಾಂಬಿನೇಷನ್ ಅನ್ನೋ ಗೊತ್ತಿದೆ. ಆದರೆ, ಸಂಗೀತ ಕೊಟ್ಟಿದ್ದು ಮನೋಮೂರ್ತಿ, ಸಾಹಿತ್ಯ ಬರೆದಿದ್ದು ಜಯಂತ್ ಕಾಯ್ಕಿಣಿ ಅಂತ ಗೊತ್ತಾಗಬೇಕು.” ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ. ಇದೇ ವೇದಿಕೆ ಮೇಲೆ ಮುಂಗಾರು ಮಳೆಯ “ಅನಿಸುತಿದೆ ಯಾಕೋ ಇಂದು..” ಹಾಡನ್ನು ಹೇಳಿ ಇದು ಹಿಟ್ ಆಗುತ್ತೆ ಭವಿಷ್ಯ ನುಡಿದಿದ್ದ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ. ಹಾಗೇ ‘ಕೃಷ್ಣಂ ಪ್ರಯಣ ಸಖಿ’ ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿದ್ದು, ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *